ಕನ್ನಡ ನಾಡು | Kannada Naadu

ಜೂನ್ 5ರಂದು ವಿಶ್ವಪರಿಸರ ದಿನ ಆಚರಣೆ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆಗೆ ಕರೆ - ಅಧ್ಯಕ್ಷ ನರೇಂದ್ರಸ್ವಾಮಿ ಪಿ.ಎಂ.

22 May, 2025

 

ಬೆಂಗಳೂರು : ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು  ಜೂನ್ 5 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ  ಹಮ್ಮಿಕೊಳ್ಳಲಾಗಿದೆ. ಈ ವರ್ಷ “ಎಂಡ್ ಪ್ಲಾಸ್ಟಿಕ್ ಪೊಲ್ಯೂಷನ್” ಎಂಬ ಘೋಷ ವಾಕ್ಯದಡಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ನಾವೆಲ್ಲರೂ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಪಣತೊಡಬೇಕು ಎಂದು  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನರೇಂದ್ರಸ್ವಾಮಿ ಪಿ.ಎಂ. ಅವರು ತಿಳಿಸಿದರು.

ಇಂದು  ಚರ್ಚ್‍ಸ್ಟ್ರೀಟ್‍ನ ಪರಿಸರ ಭವನದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.  ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಬೆಳಗ್ಗೆ 8 ಗಂಟೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ “ಪರಿಸರ ನಡಿಗೆ”ಯನ್ನು ಏರ್ಪಡಿಸಿದ್ದು, ಜಾಥಾದಲ್ಲಿ ಸರ್ಕಾರದ ಸಚಿವರು, ಶಾಸಕರು, ಗಣ್ಯರು, ಹಿರಿಯ ಅಧಿಕಾರಿಗಳೂ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಎನ್.ಸಿ.ಸಿ. ಕೆಡೆಟ್ಸ್ ಸೇರಿದಂತೆ ಸುಮಾರು 3,000 ಜನರು ಭಾಗÀವಹಿಸಿ ಪರಿಸರ ಕಾಳಜಿಯನ್ನು ಪಸರಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದ “ತ್ರಿಪುರವಾಸಿನಿ”ಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸದರಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,  ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಸಂಸದರು, ಶಾಸಕರು, ಗಣ್ಯರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ/ಸಂಸ್ಥೆಗಳಿಗೆ “ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ” ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಿದ್ಯುತ್‍ಚಾಲಿತ ವಾಹನಗಳ ಬಳಕೆ, ರೈತರಿಗೆ ವಿದ್ಯುತ್‍ಚಾಲಿತ ಟ್ರಾಕ್ಟರ್‍ಗಳ ಕುರಿತು ಮಾಹಿತಿ, ಪ್ಲಾಸ್ಟಿಕ್ ಬಾಟಲ್ ಎಸೆಯುವ ಬದಲು ಬಾಕ್ಸ್‍ನಲ್ಲಿ ಹಾಕಿ ನಾಣ್ಯ ಬರುವ ಹೊಸ ಆವಿಷ್ಕಾರಗಳ ಕುರಿತ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by