ಕನ್ನಡ ನಾಡು | Kannada Naadu

ಆಡಳಿತಾತ್ಮಕ ಸುಧಾರಣೆ 8ನೇ ವರದಿ ಸಲ್ಲಿಕೆ : ಅಧ್ಯಕ್ಷ ಆರ್.ವಿ. ದೇಶಪಾಂಡೆ

22 May, 2025

 

ಬೆಂಗಳೂರು  :  ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು, ಆಡಳಿತಾತ್ಮಕ ದಕ್ಷತೆಯನ್ನು ಸುಧಾರಿಸಲು ಮತ್ತು ನಾಗರಿಕ ಸೇವೆಗಳನ್ನು ಸಮಯೋಚಿತವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಆಡಳಿತಾತ್ಮಕ ಸುಧಾರಣೆಗೆ 2021ರಿಂದ 2024ರ ವರೆಗೆ 1ನೇ ವರದಿಯಿಂದ 7 ನೇ ವರದಿಯ ವರೆಗೆ ಒಟ್ಟು 5,039 ಶಿಫಾರಸ್ಸುಗಳನ್ನು ಸಲ್ಲಿಸಿದ್ದು, 8ನೇ ವರದಿಯಲ್ಲಿ 189 ಹೊಸ ಶಿಫಾರಸ್ಸುಗಳನ್ನು ಮಾಡಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ತಿಳಿಸಿದರು.

ಇಂದು ವಿಕಾಸಸೌಧದಲ್ಲಿ  ಹಮ್ಮಿಕೊಂಡಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಎಂಟನೇ ವರದಿ ಬಿಡುಗಡೆ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯೋಗವು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ.ವಿಜಯ್ ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಆಳವಾದ ಅಧ್ಯಯನ ನಡೆಸಿ ಮೂರು ವರ್ಷಗಳಲ್ಲಿ ಏಳು ವರದಿಗಳನ್ನು ಸಲ್ಲಿಸಿದ್ದು, ಒಟ್ಟಾರೆ ಆಡಳಿತಾತ್ಮಕ ಸುಧಾರಣೆಗೆ 5,039 ಶಿಫಾರಸ್ಸುಗಳನ್ನು ಮಾಡಿದೆ ಎಂದರು.

ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಟಾನದ ಅಗತ್ಯವನ್ನು ಮನಗಂಡ ಸರ್ಕಾರವು ನನ್ನನ್ನು ಜನವರಿ 2024 ರಿಂದ ಜಾರಿಗೆ ಬರುವಂತೆ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಿಸಿತು. ಈ ನೇಮಕಾತಿಯು ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಆಡಳಿತ ಸುಧಾರಣೆಗಳು ಮತ್ತು ಆಡಳಿತಾತ್ಮಕ ಉತ್ಕøಷ್ಟತೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಆಯೋಗದ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಅಂದರೆ, ಫೆಬ್ರವರಿ 2024 ರ ಅಂತ್ಯದ ವೇಳೆಗೆ ಕೇವಲ 99 ಶಿಫಾರಸ್ಸುಗಳನ್ನು ಮಾತ್ರ ಜಾರಿಗೆ ತರಲಾಗಿತ್ತು.
2024 ರ ಜನವರಿಯಲ್ಲಿ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಈ ಶಿಫಾರಸ್ಸುಗಳನ್ನು ಜಾರಿಗೆ ತರುವ ಮಹತ್ವವನ್ನು ಗುರುತಿಸಿ ಮತ್ತು ಅವುಗಳ ಅನುಷ್ಟಾನವನ್ನು ತ್ವರಿತಗೊಳಿಸಲು ಆದ್ಯತೆ ನೀಡಲಾಗಿತ್ತು ಮತ್ತು ಉನ್ನತ ಮಟ್ಟದ ಸಭೆಗಳಲ್ಲಿ ಶಿಫಾರಸ್ಸುಗಳ ಅನುಷ್ಟಾನವನ್ನು ಪರಿಶೀಲಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಲಾಗಿದೆ ಎಂದರು.

ಇಲಾಖಾ ಮಟ್ಟದಲ್ಲಿ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಆಯೋಗವು ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳೊಂದಿಗೆ ಔಪಚಾರಿಕವಾಗಿ ಸಂವಹನ ನಡೆಸಿದ್ದು, ಆಯಾ ಇಲಾಖೆಗಳಲ್ಲಿ ಶಿಫಾರಸ್ಸುಗಳ ಅನುಷ್ಟಾನಕ್ಕೆ ಅಗತ್ಯ ಕ್ರಮಗಳನ್ನು ಪ್ರಾರಂಭಿಸುವಂತೆ ವಿನಂತಿಸಿರುತ್ತೇನೆ. ಶಿಫಾರಸ್ಸುಗಳ ಸಮಯೋಚಿತ ಅನುಷ್ಟಾನದ ಅಗತ್ಯವನ್ನು ಬಲಪಡಿಸಲು ಈ ಸಂವಹನವು ಏಪ್ರಿಲ್ 2024 ರಲ್ಲಿ ಹಾಗೂ ಪುನಃ ನವೆಂಬರ್ 2024 ರಲ್ಲಿ ನಡೆಸಲಾಯಿತು.

ಆಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ಇಲಾಖೆಗಳ ಮುಖ್ಯಸ್ಥರು, ಅಪರ ಕಾರ್ಯದರ್ಶಿಗಳು, ವಿಶೇಷ ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಇತರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಿ, ಈ ಸಭೆಗಳಲ್ಲಿ ಅಧಿಕಾರಿಗಳು ಆಯೋಗದ ಹಿಂದಿನ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವಲ್ಲಿ ತಮ್ಮ ಸಾಧನೆಗಳ ಬಗ್ಗೆ ಸಮಗ್ರ ಪ್ರಗತಿಯನ್ನು ನೀಡಿದರು. ಇದರ ಪರಿಣಾಮವಾಗಿ 1506 ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. 201 ಶಿಫಾರಸ್ಸುಗಳನ್ನು ಭಾಗಶಃ ಜಾರಿಗೆ ತರಲಾಗಿದೆ ಮತ್ತು ಸುಮಾರು 957 ಶಿಫಾರಸ್ಸುಗಳು ಅನುಷ್ಟಾನದ ಹಂತದಲ್ಲಿವೆ ಎಂದರು.

ಆಯೋಗವು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ರಚಿಸಲಾದ ಉಪ ಸಮಿತಿಯು, ಪಡಿತರ ಚೀಟಿಗಳನ್ನು ವಿತರಿಸಲು ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಸೇರ್ಪಡೆ ಮತ್ತು ಹೊರಗಿಡುವ ಮಾನದಂಡಗಳನ್ನು ನಿರ್ಣಯಿಸುವುದು. ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ತೆಗೆದುಹಾಕಲು ಮತ್ತು ಈ ಹಿಂದೆ ಕಡೆಗಣಿಸಲ್ಪಟ್ಟ ಅರ್ಹ ಕುಟುಂಬಗಳನ್ನು ಸೇರ್ಪಡೆಗೊಳಿಸಲು ಅಗತ್ಯ ಬದಲಾವಣೆಗಳನ್ನು ಪ್ರಸ್ತಾಪಿಸುವುದು. ವಿವಿಧ ಸರ್ಕಾರಿ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಿಪಿಎಲ್ ಕಾರ್ಡ್‍ಗಳ ಮಾನದಂಡ ಬಳಕೆಯನ್ನು ಮೌಲ್ಯಮಾಪನ ಮಾಡುವುದು. ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಮಾರ್ಪಡಿಸಲು ಸಲಹೆಗಳನ್ನು ಶಿಫಾರಸ್ಸು ಮಾಡಿ ಮತ್ತು ಪ್ರತಿ ಯೋಜನೆಗೆ ಸೂಕ್ತ ಆದಾಯ ಮಿತಿಗಳ  ಶಿಫಾರಸ್ಸುಗಳ ಅಂಶಗಳನ್ನು ಪರಿಶೀಲಿಸಿದೆ.
 
ಆದಾಯ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯ ಸಮಗ್ರ ಪರಿಶೀಲನೆ ನಡೆಸಿ. ಪ್ರಾದೇಶಿಕ ಅಸಮಾನತೆಗಳನ್ನು ಗಣನೆಗೆ ತೆಗೆದುಕೊಂಡು, ಸ್ವಯಂಚಾಲಿತ ಪರಿಶೀಲನೆ ಮತ್ತು ನಿಖರವಾದ ಆದಾಯ ಮೌಲ್ಯಮಾಪನವನ್ನು ಸಕ್ರಿಯಗೊಳಿಸಲು ಕುಟುಂಬ, ಫೂಟ್ಸ್, ಪರಿವಾಹನ್ ಮತ್ತು ಭೂಮಿಯಂತಹ ಡೇಟಾಬೇಸ್‍ಗಳನ್ನು ಸಂಯೋಜಿಸುವ ಕುರಿತು ಉಪಸಮಿತಿಯು 21 ಶಿಫಾರಸ್ಸುಗಳನ್ನು ಮಾಡಿದೆ ಎಂದರು.

ಆಯೋಗವು ತನ್ನ 8 ನೇ ವರದಿಯನ್ನು ಮೇ 2025 ರಲ್ಲಿ ಅಂತಿಮಗೊಳಿಸಿತು. ಈ ವರದಿಯು ಹಿಂದಿನ ವರದಿಗಳಲ್ಲಿ ಸೇರ್ಪಡೆಯಾಗದ ಇಲಾಖೆಗಳಾದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮತ್ತು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗಳನ್ನು ಒಳಗೊಂಡಿದೆ. ವಲಯದ ಉದ್ಯಮಗಳು (ಪಿಎಸ್‍ಯುಗಳು) ಮತ್ತು ಮಧ್ಯಸ್ಥಗಾರರ ಸಲಹೆಯ ಆಧಾರದ ಮೇಲೆ ಆಯೋಗವು 189 ಹೊಸ ಶಿಫಾರಸ್ಸುಗಳನ್ನು ಮಾಡಿದೆ ಎಂದರು.
 
ಈಗಾಗಲೇ ಶೇ.30  ರಷ್ಟು ಶಿಫಾರಸುಗಳನ್ನು ಅನುಷ್ಟಾನಗೊಳಿಸಲಾಗಿದ್ದು, ಒಟ್ಟಾರೆ ಶೇ.53ಕ್ಕೂ ಹೆಚ್ಚು ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತ ತೀವ್ರ ಕ್ರಮ ಜರುಗಿಸಲಾಗಿದ್ದು, ಇದು ಕರ್ನಾಟಕ ಆಡಳಿತಾತ್ಮಕ ಸುಧಾರಣೆಯಲ್ಲಿ ಒಂದು ಮಹತ್ತರವಾದ ಹೆಜ್ಜೆಯಾಗಿದೆ ಎಂದರು.

ಆಯೋಗದ ಮುಂದಿನ ಕಾರ್ಯಗಳು:
ಆಯೋಗವು ರಾಜ್ಯವಲಯದ ಯೋಜನೆಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ, ಯೋಜನೆಗಳ ಸರಳೀಕರಣಕ್ಕೆ ಶಿಫಾರಸ್ಸು ಮಾಡುವುದಲ್ಲದೆ ಕಡಿಮೆ ಅನುದಾನ ಹಂಚಿಕೆಯಾಗುವ ಉಪಯುಕ್ತವಲ್ಲದ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ ಯೋಜನೆಗಳನ್ನು ಕೈಬಿಡುವ ಕುರಿತು ಹಾಗೂ ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ಮತ್ತು ಸಂಘಗಳಲ್ಲಿ ಅಸ್ತಿತ್ವದಲ್ಲಿರುವ ಆಡಳಿತ ವ್ಯವಸ್ಥೆಯ ಸಮಗ್ರ ಅಧ್ಯಯನ ಮತ್ತು ಮೌಲ್ಯಮಾಪನವನ್ನು ಕೈಗೊಳ್ಳುವುದು. ಮಂಡಳಿಗಳು ಮತ್ತು ನಿಗಮಗಳನ್ನು ವಿಲೀನಗೊಳಿಸುವ ಹಾಗೂ ಸಿಬ್ಬಂದಿಯನ್ನು ಮರುನಿಯೋಜಿಸುವ ಸಾಧ್ಯತೆಯನ್ನು ಆನ್ವೇಷಿಸಿ ಅವಶ್ಯ ಶಿಫಾರಸ್ಸುಗಳನ್ನು ನೀಡುವುದು. ಪ್ರತಿಯೊಂದು ಇಲಾಖೆಯ ಮೇಲಿನ ಕೆಲಸದ ಹೊರೆಯ ಸಮಗ್ರ ಅಧ್ಯಯನ ಮತ್ತು ಇಲಾಖೆಗಳ ಮರುಗಾತ್ರಗೊಳಿಸುವಿಕೆ, ಅದಕ್ಕೆ ಅನುಗುಣವಾಗಿ ಪ್ರತಿ ಇಲಾಖೆಗೆ ಸಿಬ್ಬಂದಿ ಮಾದರಿಗಳ ಪರಿಷ್ಕರಣೆ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದ ಅಗತ್ಯ  ತಿದ್ದುಪಡಿಗಳನ್ನು ಸೂಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

8ನೇ ವರದಿಯ ಕೆಲವು ಪ್ರಮುಖ ಶಿಫಾರಸುಗಳು:
ಶಿಫಾರಸುಗಳ ಪರಿಣಾಮಕಾರಿ ಅಷ್ಠಾನವನ್ನು ಖಚಿತಪಡಿಸಲು ಸರ್ಕಾರವು ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯ ರಚನೆ, ಡಿಜಿಟಲ್ ಟ್ಯಾಕಿಂಗ್ ಕಾರ್ಯವಿಧಾನ ಅಳವಡಿಕೆ,  ಇಲಾಖೆಗಳ ನಡುವೆ ಸಮನ್ವಯವನ್ನು ಬಲಪಡಿಸುವುದು.  ಅನುಷ್ಟಾನಕ್ಕೆ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳನ್ನು ಹೊರಡಿಸುವುದು, ತ್ರೈಮಾಸಿಕವಾಗಿ ಸಚಿವ ಸಂಪುಟ ಮಟ್ಟದಲ್ಲಿ ಪರಿಶೀಲನೆ, ನೀತಿಯ ನಿರ್ಧಾರಗಳು, ಅನುಷ್ಟಾನÀಗೊಂಡ ಶಿಫಾರಸ್ಸುಗಳ ಪರಿಣಾಮವನ್ನು ಸಮೀಕ್ಷೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕಾರ್ಯತಂತ್ರವನ್ನು ಆಳವಡಿಸಿಕೊಳ್ಳಬೇಕು ಎಂದು ಆಯೋಗವು ಬಲವಾಗಿ ಶಿಫಾರಸ್ಸು ಮಾಡಿದೆ ಎಂದರು.

ಆಯೋಗವು 23 ಇಲಾಖೆಗಳಲ್ಲಿ 15,000 ಮಹತ್ವದ ನಿರ್ಣಾಯಕ ಖಾಲಿ ಹುದ್ದೆಗಳನ್ನು ಗುರುತಿಸಿದೆ. ಈ ಹುದ್ದೆಗಳನ್ನು ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲು ಹಾಗೂ  ದೇವಾಲಯಗಳಲ್ಲಿ ಹೊಸ ಹುದ್ದೆಗಳ ಮಂಜೂರಾತಿಗಾಗಿ ಕಾರ್ಯದರ್ಶಿ/ಧರ್ಮಾದಾಯ ದತ್ತಿ ಆಯುಕ್ತರಿಗೆ ಅಧಿಕಾರ ಪ್ರತ್ಯಾಯೋಜನೆ, ಹೆಚ್ಚಿನ ಜನಸಂದಣಿ ಇರುವ ದೇವಾಲಯಗಳಲ್ಲಿ, ವಿಶೇಷವಾಗಿ ಹಬ್ಬಗಳು, ಜಾತ್ರೆಗಳು ಮತ್ತು ಇತರ ಶುಭ-ಸಮಾರಂಭಗಳ ಸಮಯದಲ್ಲಿ ಭಕ್ತರು ಹಗಲು ಮತ್ತು ರಾತ್ರಿಯಿಡೀ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಮಯದಲ್ಲಿ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ದೇವಾಲಯ ಕಾರ್ಯಪಡೆಯನ್ನು  ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ ಎಂದರು.

ಈ ಹಿಂದೆ ವಿಧಾನಸೌಧದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಗ್ರಿಗಳ ಮಳಿಗೆ ಇದ್ದು, ಇದು ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಎಲ್ಲಾ ಇಲಾಖೆಗಳು ಮತ್ತು ಪ್ರಮುಖ ಸರ್ಕಾರಿ ಕಚೇರಿಗಳಿಗೆ ಲೇಖನ ಸಾಮಗ್ರಿಗಳ ಪರಿಣಾಮಕಾರಿ ಮತ್ತು ಸಕಾಲಿಕ ಪೂರೈಕೆಯನ್ನು ನಿರ್ವಹಿಸುತ್ತಿತ್ತು. ಈಗ ಮೈಸೂರು ರಸ್ತೆಯ ಕೆಂಗೇರಿ ಕೇಂದ್ರ ಮುದ್ರಣಾಲಯಕ್ಕೆ ಇದು ಸ್ಥಳಾಂತರಗೊಂಡಾಗಿನಿಂದ ಹೆಚ್ಚಿದ ದೂರ, ದೀರ್ಘ ಪ್ರಯಾಣದ ಸಮಯ ಮತ್ತು ಹೆಚ್ಚಿನ ಸಾರಿಗೆ ವೆಚ್ಚಗಳಿಂದಾಗಿ ಲೇಖನ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಿಸುವಲ್ಲಿ ತೊಂದರೆಗಳು ಉದ್ಭವಿಸಿವೆ. ಆದ್ದರಿಂದ, ವಿಧಾನಸೌಧ, ವಿಕಾಸಸೌಧ ಅಥವಾ ಬಹುಮಹಡಿ ಕಟ್ಟಡದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ.
 
ಮುದ್ರಣ ಸೇವೆಗಳಿಗೆ ಅಸ್ತಿತ್ವದಲ್ಲಿರುವ ಬೆಲೆ ನಿಗದಿ ಕಾರ್ಯವಿಧಾನವು ದಶಕಗಳಷ್ಟು ಹಳೆಯದಾದ ಕೈಪಿಡಿಯನ್ನು ಆಧರಿಸಿದೆ. ಅದು ಪ್ರಸ್ತುತ ಮಾರುಕಟ್ಟೆ ಬೆಲೆಗಳನ್ನು ಪ್ರತಿಬಿಂಬಿಸುವುದಿಲ್ಲ. ಸ್ಪರ್ಧಾತ್ಮಕ ಬೆಲೆ ಮತ್ತು ಸುಸ್ಥಿರತೆಯ ಖಾತ್ರಿ ಕಾಪಾಡಿಕೊಳ್ಳಲು ಉತ್ಪಾದಕತೆ ಮತ್ತು ಮುದ್ರಣ ಗುಣಮಟ್ಟವನ್ನು ಹೆಚ್ಚಿಸಲು ಅತ್ಯಾಧುನಿಕ ಮುದ್ರಣ ಉಪಕರಣಗಳನ್ನು ಆಳವಡಿಸಿಕೊಳ್ಳಲು. ಮುದ್ರಣ ಆಯ್ಕೆಗಳಿಗಾಗಿ ಡಿಜಿಟಲ್ ಮುದ್ರಣ ಪರಿಹಾರಗಳನ್ನು ಸಂಯೋಜಿಸಲು, ಮುದ್ರಣ ಗುಣಮಟ್ಟ ಮತ್ತು ಸೇವಾ ವಿತರಣೆಯ ಉನ್ನತ ಮಾನದಂಡಗಳನ್ನು ಅಳವಡಿಸಿಕೊಳ್ಳುವಾಗ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನವನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ.

15 ವರ್ಷಕ್ಕಿಂತ ಹಳೆಯದಾದ ಯಂತ್ರಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ವರದಿಯಾಗಿದೆ ಮತ್ತು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ಅತ್ಯಂತ ಹಳೆಯ ಯಂತ್ರಗಳನ್ನು ಬದಲಾಯಿಸುವುದು ಮಾತ್ರವಲ್ಲದೆ, ಐಟಿಐ ಮತ್ತು ಪಾಲಿಟೆಕ್ನಿಕ್ ಪ್ರಯೋಗಾಲಯಗಳನ್ನು ಪ್ರಸ್ತುತ ಪಠ್ಯಕ್ರಮಕ್ಕೆ ಉನ್ನತೀಕರಿಸಲು ಶಿಫಾರಸ್ಸು ಮಾಡಲಾಗಿದೆ.

ನಗರ ಪ್ರದೇಶಗಳಲ್ಲಿ ಅನುಮೋದಿತ ಮಾಸ್ಟರ್ ಪ್ಲಾನ್‍ಗಳು ಅನುಪಸ್ಥಿತಿಯಲ್ಲಿ, ಅನಿಯಂತ್ರಿತ ಮತ್ತು ಅವ್ಯವಸ್ಥಿತ ಅಭಿವೃದ್ಧಿ ಸಂಭವಿಸುವ ಸಾಧ್ಯತೆಯಿರುವುದರಿಂದ, ಇದು ಕಾನೂನು ವಿವಾದಗಳು ಮತ್ತು ಆಡಳಿತದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಗರಾಭಿವೃದ್ಧಿ ಇಲಾಖೆಯ ಸಭೆಯಲ್ಲಿ, ಕರಡು ಮಾಸ್ಟರ್ ಪ್ಲಾನ್‍ಗಳ ಅಧಿಸೂಚನೆಯ ಹೊರತಾಗಿಯೂ, ಹಲವಾರು ನಗರಾಭಿವೃದ್ಧಿ ಪ್ರಾಧಿಕಾರಗಳು ನಿಗದಿತ ಎರಡು ವಷರ್Àಗಳ ಅವಧಿ ಪೂರ್ಣಗೊಂಡ ನಂತರವೂ ಅಂತಿಮ ಆವೃತ್ತಿಯ ಮಾಸ್ಟರ್ ಪ್ಲಾನ್‍ಗಳನ್ನು ಸಲ್ಲಿಸುರುವುದಿಲ್ಲ. ಈ ವಿಳಂಬವು ಯೋಜಿತ ನಗರ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದು. ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು ವಿಳಂಬವು ನಿಗದಿತ ಎರಡು ವರ್ಷಗಳ ಕಾಲಮಿತಿಯನ್ನು ಮೀರಿದರೆ, ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ದಂಡ ವಿಧಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

'ಗ್ರಾಮಠಾಣೆಯ' ಗಡಿಗಳನ್ನು ಹಲವು ವರ್ಷಗಳಿಂದ ಮರು ಗುರುತಿಸಲಾಗಿಲ್ಲದಿರುವುದು ಗ್ರಾಮಗಳ ಪಕ್ಕದ ಕಂದಾಯ ಸರ್ವೇ ನಂಬರಿನ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿಗೆ ಕಾರಣವಾಗುತ್ತದೆ. ಈ ಪ್ರದೇಶಗಳನ್ನು ಅಧಿಕೃತವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸದ ಕಾರಣ, ಗ್ರಾಮ ಪಂಚಾಯಿತಿಗಳು ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಆಡಳಿತಾತ್ಮಕವಾಗಿ ದಾವೆಗಳನ್ನು ಸೃಷ್ಟಿಸುತ್ತದೆ. ಪ್ರಸ್ತುತ ವಾಸ್ತವಗಳ ಆಧಾರದ ಮೇಲೆ ಗ್ರಾಮಠಾಣಾ ಗಡಿಗಳನ್ನು ಮರುವ್ಯಾಖ್ಯಾನಿಸಲು ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು, ಇದು ದೊಡ್ಡ ಪ್ರಮಾಣದ ಯೋಜನೆಯಾಗಿರುವುದರಿಂದ, ಗಡಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ಗ್ರಾಮಗಳಿಗೆ ಆದ್ಯತೆ ನೀಡಿ, ಹಂತ ಹಂತವಾಗಿ ಕಾರ್ಯಗತಗೊಳಿಸಬೇಕು ಹಾಗೂ ಯುಪಿಎಸ್‍ಸಿ, ಕೆಪಿಎಸ್‍ಸಿ ಮತ್ತು ಕೆಇಎಗೆ ಸಂಬಂಧಿಸಿದ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಬೆಂಗಳೂರನ್ನು ಹೊರತು ಪಡಿಸಿದರೆ ಸಮೀಪದ ಧಾರವಾಡದಲ್ಲಿ ನಡೆಯುವುದರಿಂದ, ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಹಾಗೂ ಈ ಪರೀಕ್ಷೆಗಳನ್ನು ಪದೇ ಪದೇ ಆಯೋಜಿಸುವುದರಿಂದ ಜಿಲ್ಲಾಡಳಿತಕ್ಕೆ ನಿರ್ವಹಣೆಯ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕರ್ನಾಟಕ ಲೋಕಸೇವಾ ಆಯೋಗದ ಶಾಖಾ ಕಚೇರಿಯನ್ನು ಧಾರವಾಡದಲ್ಲಿ ತೆರೆಯಲು ಶಿಫಾರಸ್ಸು ಮಾಡಲಾಗಿದೆ ಎಂದರು.
 
ವ್ಯವಹಾರ ಪ್ರಕ್ರಿಯೆ ಪುನರ್ವಿನ್ಯಾಸ ಕೋಶವು ಪ್ರಸ್ತುತ ಇ-ಆಡಳಿತ ಕೇಂದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಸಕಾಲ ಮಿಷನ್ ಅಡಿಯಲ್ಲಿ ಕೆಲಸ ಮಾಡುವುದು ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಬಿಪಿಆರ್ ಕೋಶದ ಪ್ರಮುಖ ಕಾರ್ಯವೆಂದರೆ ಸಕಾಲ-ಅಧಿಸೂಚಿತ ಸೇವೆಗಳ ಸಮಯವನ್ನು ಕಡಿಮೆ ಮಾಡುವುದು ಮತ್ತು ಅದೇ ಸಮಯದಲ್ಲಿ ಸೇವಾ ವಿತರಣೆಯ ಗುಣಮಟ್ಟವನ್ನು ಸುಧಾರಿಸುವುದು. ಸೇವಾ ಅರ್ಜಿಗಳಲ್ಲಿ ಹಸ್ತಚಾಲಿತ ಡೇಟಾ ನಮೂದನ್ನು ಕಡಿಮೆ ಮಾಡುವ ಮೂಲಕ ಮತ್ತು ಅರ್ಜಿದಾರರಿಂದ ಅಗತ್ಯವಿರುವ ದಾಖಲೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಆದ್ದರಿಂದ ಬಿಪಿಆರ್ ಕೋಶವನ್ನು ಸಕಾಲ ಮಿಷನ್ ಅಡಿಯಲ್ಲಿ ತರಲು ಶಿಫಾರಸ್ಸು ಮಾಡಲಾಗಿದೆ. ಇದಲ್ಲದೆ ಬಿಪಿಆರ್ ಕೋಶ ಮತ್ತು ಸಕಾಲ ಮಿಷನ್  ಎರಡನ್ನೂ ಡಿಪಿಎಆರ್ (ಎಆರ್) ಅಡಿಯಲ್ಲಿ ತಂದರೆ ಅದು ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಏಕೆಂದರೆ ಎರಡೂ ಮೂಲಭೂತವಾಗಿ ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿವೆ ಎಂದರು.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಜವಾಬ್ದಾರಿಯಾಗಿದೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಗಣಿ ಮತ್ತು ಭೂವಿಜ್ಞಾನ ಲೆಕ್ಕಪರಿಶೋಧನೆಗಳಿಗಾಗಿ) ಅಥವಾ ಸೆಂಟ್ರಲ್ ಪಬ್ಲಿಕ್ ವಕ್ರ್ಸ್ ಇಲಾಖೆಯಂತಹ ತಾಂತ್ರಿಕ ಸಂಸ್ಥೆಗಳ ಸಮನ್ವಯದೊಂದಿಗೆ, ನಿರ್ಣಾಯಕ ಸಂದರ್ಭಗಳಲ್ಲಿ ಅಕೌಂಟೆಂಟ್ ಜನರಲ್ ತಾಂತ್ರಿಕ ಲೆಕ್ಕಪರಿಶೋಧನೆಯನ್ನು ಕೈಗೊಳ್ಳುತ್ತಾರೆ. ಜಂಟಿ ತಪಾಸಣೆ, ಕಾರ್ಯಕ್ಷಮತೆ ಲೆಕ್ಕಪರಿಶೋಧನೆ, ತಾಂತ್ರಿಕ ಲೆಕ್ಕಪರಿಶೋಧನೆ ಇತ್ಯಾದಿಗಳನ್ನು ಸುಗಮಗೊಳಿಸಲು ರಾಜ್ಯ ಲೆಕ್ಕಪತ್ರ ಇಲಾಖೆಯು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನಂತಹ ನಿಬಂಧನೆಗಳನ್ನು ಹೊಂದಿಲ್ಲ. ಈ ಅಧಿಕಾರಗಳು ಇಲಾಖೆಯು ಸಮಗ್ರ ಲೆಕ್ಕಪರಿಶೋಧನೆಗಳನ್ನು ನಡೆಸಲು, ಲೆಕ್ಕಪರಿಶೋಧನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಗಂಭೀರ ಅಕ್ರಮಗಳನ್ನು ಗುರುತಿಸಲು, ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ವಂಚನೆ ಪತ್ತೆ ಹಚ್ಚುವಿಕೆಯನ್ನು ಸುಧಾರಿಸಲು ಹೆಚ್ಚು ವ್ಯವಸ್ಥಿತ ವಿಧಾನಕ್ಕಾಗಿ ತಾಂತ್ರಿಕ ಲೆಕ್ಕಪರಿಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸಲು ಶಿಫಾರಸ್ಸು ಮಾಡಲಾಗಿದೆ. ಇದೇ ರೀತಿಯ ಅಧಿಕಾರಗಳನ್ನು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಪ್ರತ್ಯಾಯೋಜಿಸಲು ಪ್ರಸ್ತಾಪಿಸಲಾಗಿದೆ. ಇದು ರಾಜ್ಯ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‍ಯು) ತಾಂತ್ರಿಕ ಪರಿಣತಿಯನ್ನು ಬಳಸಿಕೊಂಡು ಪ್ರಮುಖ ಹಣಕಾಸಿನ ಅಕ್ರಮಗಳ ಸಂದರ್ಭಗಳಲ್ಲಿ ಆಳವಾದ ತಾಂತ್ರಿಕ ಲೆಕ್ಕಪರಿಶೋಧನೆಗಳನ್ನು ನಡೆಸಲು ಇಲಾಖೆಗೆ ಅಧಿಕಾರ ನೀಡುತ್ತದೆ ಎಂದರು.

ಪಡಿತರ ಚೀಟಿಗಳನ್ನು ವಿತರಿಸಲು ಎಲ್ಲಾ ಹೊರಗಿಡುವ ಮಾನದಂಡಗಳನ್ನು ಕುಟುಂಬ ದತ್ತಾಂಶದೊಂದಿಗೆ ಪರಿಶೀಲಿಸಬೇಕು. ಇದರಲ್ಲಿ ಜಿಎಸ್‍ಟಿ, ಇಪಿಎಫ್, ಆದಾಯ ತೆರಿಗೆ ಡೇಟಾಬೇಸ್‍ಗಳು ಸೇರಿವೆ. ಭೂ ದಾಖಲೆ ಡೇಟಾಬೇಸ್ ಭೂಮಿ, ರಾಜ್ಯ ಸರ್ಕಾರಿ ನೌಕರರ ಡೇಟಾಬೇಸ್ ಹೆಚ್‍ಆರ್‍ಎಂಎಸ್, ಮೋಟಾರು ವಾಹನ ನೋಂದಣಿ ಡೇಟಾಬೇಸ್ ಪರಿವಾಹನ್, ನಗರ ಅಸ್ತಿ ಡೇಟಾಬೇಸ್ (ಇ-ಆಸ್ತಿ) ಮತ್ತು ವಾರ್ಷಿಕ ನಿಗದಿತ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ/ಗುತ್ತಿಗೆ ನೌಕರರ ಡೇಟಾಬೇಸ್ ಪರಿಗಣಿಸಿ ಸೇರ್ಪಡೆ ಮತ್ತು ಹೊರಗಿಡುವಿಕೆ ದೋಷಗಳನ್ನು ಕಡಿಮೆ ಮಾಡಲು ಈ ಡೇಟಾಬೇಸ್‍ಗಳನ್ನು ಪಡಿತರ ಚೀಟಿ ಡೇಟಾಬೇಸ್‍ನೊಂದಿಗೆ ಸಂಯೋಜಿಸುವುದು ಅತ್ಯಗತ್ಯವಾಗಿರುತ್ತದೆ.

ಪ್ರಸ್ತುತ ಅರ್ಹ ಕಾರ್ಡ್‍ದಾರರ ಪಟ್ಟಿಯಿಂದ ಅನರ್ಹರೆಂದು ಕಂಡುಬರುವ ಕಾರ್ಡ್‍ನ್ನು ನೇರವಾಗಿ ಅಮಾನತುಗೊಳಿಸುವುದು/ಪಡಿತರ ಚೀಟಿಗಳನ್ನು ರದ್ದುಗೊಳಿಸುವುದು ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಫಲಾನುಭವಿಗಳು ತಾವು ಹೇಗೆ ಅರ್ಹರಲ್ಲ ಎಂಬುದನ್ನು ಪ್ರಸ್ತುತ ಪಡಿಸಲು ಯಾವುದೇ ಅವಕಾಶವಿಲ್ಲ. ಎಎವೈ ಮತ್ತು ಪಿಎಚ್‍ಎಚ್ ಪಡಿತರ ಚೀಟಿಗಳನ್ನು ಸೇರಿಸಲು ಮತ್ತು ಹೊರಗಿಡಲು ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ಪ್ರಕ್ರಿಯೆಯನ್ನು ಔಪಚಾರಿಕಗೊಳಿಸಲು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಸಿದ್ಧಪಡಿಸಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು(ಎಸ್‍ಓಪಿ) ಅನುಸರಿಸಿ ಈ ಪ್ರಕ್ರಿಯೆಯಲ್ಲಿ ಅನರ್ಹಗೊಳಿಸುವ ಮೊದಲು ಮೇಲ್ಮನವಿಯ ಅವಕಾಶ ಒದಗಿಸುತ್ತದೆ. ಪಡಿತರ ಚೀಟಿ ಡೇಟಾಬೇಸ್ ಅನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ (ಇ-ಜನ್ಮ) ಸಂಯೋಜಿಸಬೇಕು. ಇದರಿಂದ ಮೃತ ಸದಸ್ಯನನ್ನು ರದ್ದುಗೊಳಿಸುವಿಕೆಯ ಮುಂದಿನ ಅಗತ್ಯ ಕ್ರಮಕ್ಕಾಗಿ ಗುರುತಿಸಬಹುದು.

ಮಂಡಳಿಗಳು, ನಿಗಮಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳಲ್ಲಿ ಈಗಾಗಲೇ ಅನ್ವಯವಾಗುವ ಅನರ್ಹತೆ ಮಾನದಂಡಗಳಲ್ಲಿ ಪಟ್ಟಿ ಮಾಡಲಾದ ನೌಕರರು ಮತ್ತು ಹೊರಗುತ್ತಿಗೆ/ಗುತ್ತಿಗೆ ನೌಕರರ ಡೇಟಾವನ್ನು ಪ್ರತಿ ವರ್ಷ ಸಂಯೋಜಿಸಬೇಕು ಮತ್ತು ನವೀಕರಿಸಬೇಕು. ಇದು ರಾಜ್ಯ ಸರ್ಕಾರಿ ನೌಕರರಿಗಾಗಿ ಈಗಾಗಲೇ ನಿರ್ವಹಿಸುವ ಹೆಚ್‍ಆರ್‍ಎಂಎಸ್ ದತ್ತಾಂಶವನ್ನು ಹೊರತಾಗಿರಬಹುದು.

ಅನರ್ಹತೆ ಮಾನದಂಡಗಳ ಪ್ರಕಾರ, 3 ಹೆಕ್ಟೇರ್ ಗಿಂತ ಹೆಚ್ಚು ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿಯನ್ನು ಹೊಂದಿರುವವರ ಭೂ ವಿವರಗಳ ಪರಿಶೀಲನೆಗಾಗಿ ಪಡಿತರ ಚೀಟಿಗಳ ಡೇಟಾಬೇಸ್ ಅನ್ನು ಭೂಮಿ ಡೇಟಾಬೇಸ್ ನೊಂದಿಗೆ ಸಂಯೋಜಿಸಬೇಕು.
ವಾಹನ ನೋಂದಣಿ ವಿವರಗಳನ್ನು ಪರಿವಾಹನ್ ಪೆÇೀರ್ಟಲ್‍ನಿಂದ ಪಡೆಯಬಹುದು ಮತ್ತು ಹೊಸ ನೋಂದಣಿಗಾಗಿ ಪರಿಶೀಲಿಸಬಹುದು ಮತ್ತು ಅನರ್ಹತೆ ಮಾನದಂಡಗಳ ಪ್ರಕಾರ ಆನರ್ಹ ಪಡಿತರ ಚೀಟಿಗಳನ್ನು ಮುಂದಿನ ಕ್ರಮಕ್ಕಾಗಿ ಗುರುತಿಸಬಹುದು.
ಆದಾಯದ ಪ್ರಮಾಣೀಕರಣಕ್ಕಾಗಿ ಸಂಬಂಧಿತ ಡೇಟಾಬೇಸ್‍ನಲ್ಲಿ ಲಭ್ಯವಿರುವ ಆದಾಯ ದತ್ತಾಂಶವನ್ನು (ಕರ್ನಾಟಕದಲ್ಲಿ ಇದು ಎಜೆಎಸ್‍ಕೆ ಪೆÇೀರ್ಟಲ್) ಪಡಿತರ ಚೀಟಿ ಡೇಟಾಬೇಸ್‍ನೊಂದಿಗೆ ಸಂಯೋಜಿಸಬೇಕು, ಸಂಬಂಧಿತ ಆದಾಯ ಮಾನದಂಡಗಳ ಪ್ರಕಾರ ಅನರ್ಹ ಪಿಎಚ್‍ಎಚ್/ಎಎವೈ ಪಡಿತರ ಚೀಟಿಗಳನ್ನು ಮುಂದಿನ ಕ್ರಮಕ್ಕಾಗಿ ಗುರುತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಆಯಾಮಗಳು ಸೇರಿದಂತೆ ಇ-ಅಸ್ತಿ/ವಸತಿ ಮನೆಗಳ ವಿವರಗಳನ್ನು ನಗರಾಭಿವೃದ್ಧಿ ಇಲಾಖೆ ನಿರ್ವಹಿಸುವ ಸಾಫ್ಟ್‍ವೇರ್‍ನಿಂದ ಪಡೆಯಬಹುದು, ಅನರ್ಹತೆ ಮಾನದಂಡಗಳ ಪ್ರಕಾರ 1000 ಚದರ ಅಡಿಗಿಂತ ಹೆಚ್ಚು ನಿರ್ಮಾಣ ಪ್ರದೇಶವನ್ನು ಹೊಂದಿರುವ ಕುಟುಂಬಗಳನ್ನು ಪರಿಶೀಲಿಸಬಹುದು. ಅನರ್ಹ ಎಎವೈ ಮತ್ತು ಪಿಎಚ್‍ಎಚ್ ಕಾರ್ಡ್‍ಗಳನ್ನು ಪತ್ತೆಹಚ್ಚಲು ಉಪಯುಕ್ತವಾದ ಇಎಸ್‍ಐ, ಇಪಿಎಫ್ ಮುಂತಾದ ಇತರ ಡೇಟಾಬೇಸ್‍ಗಳನ್ನು ಇ-ಆಡಳಿತ ಇಲಾಖೆ ಟ್ಯಾಕ್ ಮಾಡುತ್ತದೆ ಮತ್ತು ಸಂಯೋಜಿಸುತ್ತದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇ-ಆಡಳಿತ ಇಲಾಖೆಯ ಸಮನ್ವಯದೊಂದಿಗೆ ಸೇರ್ಪಡೆ ಮತ್ತು ಆನರ್ಹತೆ ದೋಷಗಳನ್ನು ಗುರುತಿಸಲು ಮತ್ತು ಕಡಿಮೆ ಮಾಡಲು ವ್ಯವಸ್ಥಿತ ಮತ್ತು ಸದೃಢವಾದ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಬಹುದು.
ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‍ಇಸಿಸಿ) 2011 ರ ಸಮಯದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿಗದಿಪಡಿಸಿದ ಮಾನದಂಡಗಳು ಮತ್ತು ವಿಧಾನವನ್ನು ರಾಜ್ಯ ಸರ್ಕಾರವು ಅಗತ್ಯವಿರುವಲ್ಲಿ ಸೂಕ್ತ ಮಾರ್ಪಾಡುಗಳೊಂದಿಗೆ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಪರಿಗಣಿಸಬಹುದು. ಬಿಪಿಎಲ್ ಪಟ್ಟಿಗಳ ಅಂತಿಮ ಅನುಮೋದನೆಯನ್ನು ಕ್ರಮವಾಗಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಬಂಧಿತ ಗ್ರಾಮ/ವಾರ್ಡ್ ಸಭೆಗಳು ಅನುಮೋದಿಸಬಹುದು.
ಕಡ್ಡಾಯ ಸೇರ್ಪಡೆ ಪ್ರಕ್ರಿಯೆಯನ್ನು ಸುವ್ಯವಸ್ಥೆಗೊಳಿಸುವುದು:

ಆಹಾರ, ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಥಳೀಯ ಸಂಸ್ಥೆಗಳ ಸಹಾಯದಿಂದ ಸಮಗ್ರಗೊಂಡ ಕುಟುಂಬ ದತ್ತಾಂಶದ ಬಳಸಿಕೊಂಡು ಎಎವೈ ಅಥವಾ ಪಿಎಚ್‍ಎಚ್ ಅಡಿಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳು, ವಿಕಲಚೇತನರು, ಜೀತದಾಳುಗಳು, ಪರಿಶೀಲಿಸಿದ ಮ್ಯಾನ್ಯುವಲ್ ಸ್ಕಾವೆಂಜರ್‍ಗಳು, ವಿಧವೆಯರು, ಒಂಟಿ ಮಹಿಳೆಯgರು, ಬೇರ್ಪಟ್ಟವರು, ಪರಿತ್ಯಕ್ತರು, ಅವಿವಾಹಿತ ವಿಚ್ಛೇದಿತರು,  ಮಾರಣಾಂತಿಕ ಆನಾರೋಗ್ಯ ಪೀಡಿತ ವ್ಯಕ್ತಿಗಳು ಅಥವಾ ಕುಷ್ಠರೋಗ ರೋಗಿಗಳು,  ಅನಾಥರು, ನಿರ್ಗತಿಕರು, ಆಶ್ರಯಗಳಲ್ಲಿ ವಾಸಿಸುವ ಮಹಿಳೆಯರು, ತೃತೀಯ ಲಿಂಗಿ ವ್ಯಕ್ತಿಗಳು,  ಜೀವನಾಧಾರದ ಯಾವುದೇ ಖಚಿತ ಸಾಧನಗಳಿಲ್ಲದ ವಸತಿರಹಿತ ವ್ಯಕ್ತಿಗಳು, ವೃದ್ಧಾಪ್ಯ, ಅಂಗವೈಕಲ್ಯ ಇತರ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಸ್ವೀಕರಿಸುವವರು ಕೊಳೆಗೇರಿ ನಿವಾಸಿಗಳು, ವಸತಿಹೀನರು ಮತ್ತು ಭೂರಹಿತ ವ್ಯಕ್ತಿಗಳು, ಕಚ್ಚಾ ಮನೆಗಳನ್ನು ಹೊಂದಿರುವ ವ್ಯಕ್ತಿಗಳು, ಭೂರಹಿತ ಕೃಷಿ ಕಾರ್ಮಿಕರು, ಅತಿ ಸಣ್ಣ ರೈತರು, ಕೈ ಗಾಡಿ ಎಳೆಯುವವರು, ಹಣ್ಣು ಮತ್ತು ಹೂವು ಮಾರಾಟಗಾರರು, ಹಾವಾಡಿಗರು, ಚಿಂದಿ ಆಯುವವರು, ಚಮ್ಮಾರರು ಮತ್ತು ಇತರ ಬೀದಿ ಬದಿ ವ್ಯಾಪಾರಿಗಳು, ಕುಂಬಾರರು, ಚರ್ಮದ ಕೆಲಸಗಾರರು, ನೇಕಾರರು, ಕಮ್ಮಾರರು, ಬಡಗಿಗಳಂತಹ ಗ್ರಾಮೀಣ ಕುಶಲಕರ್ಮಿಗಳು, ಕುಶಲಕರ್ಮಿಗಳು,  ದಿನಗೂಲಿ ಕಾರ್ಮಿಕರು, ಮನೆಕೆಲಸದವರು, ವಿಪತ್ತುಗಳ ಸಮಯದಲ್ಲಿ ಸ್ಥಳಾಂತರಗೊಂಡ ಕುಟುಂಬಗಳು,  ಕಡಿಮೆ ಆದಾಯದ ಗುಂಪಿನಲ್ಲಿ ಹಿಂಸಾಚಾರ ಪೀಡಿತ ಕುಟುಂಬಗಳು, ಕಂದಾಯ ಇಲಾಖೆಯಿಂದ ನೀಡಲಾದ ಆದಾಯ ಪ್ರಮಾಣಪತ್ರದ ಪ್ರಕಾರ ಅರ್ಹ ಮಾಸಿಕ ಆದಾಯವನ್ನು ಹೊಂದಿರುವ ಎಲ್ಲಾ ವರ್ಗದ ಕುಟುಂಬಗಳನ್ನು ಪರಿಶೀಲಿಸಲಾಗಿದೆ ಮತ್ತು ಸೂಕ್ತ ಪಡಿತರ ಚೀಟಿದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ಮೌಲ್ಯಮಾಪನದ ವಾರ್ಷಿಕ ಪ್ರಕ್ರಿಯೆಯಲ್ಲಿ, ಎಎವೈ ಮಾನದಂಡಗಳನ್ನು ದಾಟುವ ಕುಟುಂಬಗಳನ್ನು ಪಿಎಚ್‍ಎಚ್ ವರ್ಗಕ್ಕೆ ಸ್ಥಳಾಂತರಿಸುವ ಸಂದರ್ಭಗಳು ಇರಬಹುದು. ಅಂತೆಯೇ ಪಿಎಚ್‍ಎಚ್ ಕಾರ್ಡ್‍ಗಳಿಗೆ ನಿಗದಿತ ಮಾನದಂಡಗಳನ್ನು ಪೂರೈಸದ ಪಿಎಚ್‍ಎಚ್ ಕಾರ್ಡ್‍ದಾರರನ್ನು ಎಪಿಎಲ್ ವರ್ಗಕ್ಕೆ ವರ್ಗೀಕರಿಸಬಹುದು.

ಆದಾಯ ಪ್ರಮಾಣಪತ್ರಗಳ ವಿತರಣೆಯ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವುದಕ್ಕೆ ಸಂಬಂಧಿಸಿದ ಶಿಫಾರಸುಗಳು:
ಕುಟುಂಬಕ್ಕೆ ನೀಡಲಾಗುವ ಆದಾಯ ಪ್ರಮಾಣಪತ್ರವು ಕುಟುಂಬ ಡೇಟಾಬೇಸ್‍ನ ಒಂದು ಭಾಗವಾಗಿರಬೇಕು. ಇದರಿಂದಾಗಿ, ಸರ್ಕಾರದಿಂದ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಕುಟುಂಬ ಐಡಿಯನ್ನು ಒದಗಿಸಬೇಕು. ಪ್ರಸ್ತುತ, ಕುಟುಂಬದ ಎಲ್ಲಾ ಸದಸ್ಯರ ಆದಾಯವನ್ನು ನಿರ್ಣಯಿಸಲಾಗುತ್ತದೆ ಮತ್ತು ಪ್ರತಿ ಕುಟುಂಬಕ್ಕೆ ಒಂದೇ ಆದಾಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪ್ರಕ್ರಿಯೆಯನ್ನು ಸುಗಮಗೊಳಿಸಲು, ಇಡೀ ಕುಟುಂಬಕ್ಕೆ ಏಕೀಕೃತ ಆದಾಯ ಪ್ರಮಾಣಪತ್ರವನ್ನು ನೀಡಬೇಕು. ಕುಟುಂಬ ಡೇಟಾಬೇಸ್‍ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಸದಸ್ಯರು ಒಂದೇ ಆದಾಯವನ್ನು ಪ್ರತಿಬಿಂಬಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ಈ ವಿಧಾನವು ವಿವಿಧ ಉದ್ದೇಶಗಳಿಗಾಗಿ ವೈಯಕ್ತಿಕ ಕುಟುಂಬ ಸದಸ್ಯರಿಗೆ ಪ್ರತ್ಯೇಕ ಆದಾಯ ಪ್ರಮಾಣಪತ್ರಗಳ ಅಗತ್ಯತೆಯನ್ನು ತೆಗೆದುಹಾಕುತ್ತದೆ. ಆದರಂತೆ, ಈ ಬದಲಾವಣೆಯನ್ನು ಜಾರಿಗೆ ತರಲು ಕಂದಾಯ ಇಲಾಖೆ ಆದಾಯ ಪ್ರಮಾಣಪತ್ರದ ನಮೂನೆಯನ್ನು ಪರಿಷ್ಕರಿಸಬೇಕು. ಹೆಚ್ಚುವರಿಯಾಗಿ, ಉದ್ಯೋಗ, ಮೀಸಲಾತಿ ಮತ್ತು ಇತರ ಉದ್ದೇಶಗಳಿಗಾಗಿ ಬಹು ಆದಾಯ ಪ್ರಮಾಣಪತ್ರಗಳ ವಿತರಣೆಯನ್ನು ನಿಲ್ಲಿಸಬೇಕು. ಆದಾಯ ಪ್ರಮಾಣಪತ್ರದ ಸಿಂಧುತ್ವವು 5 ವರ್ಷಗಳÀ ಅವಧಿಗೆ ಇರುತ್ತದೆ. ಅಸ್ತಿತ್ವದಲ್ಲಿರುವ ಪ್ರಮಾಣಪತ್ರವು ಮಾನ್ಯವಾಗಿರುವಾಗ ಅರ್ಜಿದಾರರು ಆದಾಯ ಪ್ರಮಾಣಪತ್ರಕ್ಕಾಗಿ ಹೊಸ ಅರ್ಜಿಗಳನ್ನು ಸಲ್ಲಿಸುವುದನ್ನು ತಡೆಯಲು ತಂತ್ರಾಂಶವನ್ನು ಸಂರಚನೆÉ ಮಾಡಬೇಕು. ಈ ಕ್ರಮವು ಕ್ಷೇತ್ರ ಸಿಬ್ಬಂದಿಯ ಕೆಲಸದ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಜಾತಿ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಸಂಬಂಧಿತ ಡೇಟಾಬೇಸ್ ಗಳಿಂದ ನೇರವಾಗಿ ಪಡೆಯುವಂತೆ, ಆದಾಯ ಪ್ರಮಾಣಪತ್ರ ಡೇಟಾಬೇಸ್‍ಗೆ ಲಿಂಕ್ ನೀಡಬೇಕು. ಇದು ಅರ್ಜಿದಾರರು ಅರ್ಜಿಯಲ್ಲಿ ಸಲ್ಲಿಸಿದ ಮಾಹಿತಿಯ ಪರಿಶೀಲನೆಗೆ ಅನುಕೂಲ ಮಾಡಿಕೊಡುತ್ತದೆ ಎಂದರು.
 
ಉನ್ನತ ತರಗತಿಗಳಿಗೆ ಪ್ರವೇಶ ಅಥವಾ ಬಡ್ತಿಗಾಗಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆದಾಯ ಅಥವಾ ಜಾತಿ ಪ್ರಮಾಣಪತ್ರಗಳ ಹಾರ್ಡ್ ಕಾಪಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸೂಚಿಸಿ ಎಲ್ಲಾ ಇಲಾಖೆಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರಮುಖ ಸುತ್ತೋಲೆ ಹೊರಡಿಸಬೇಕು. ಬದಲಾಗಿ, ಆದಾಯ ವಿವರಗಳನ್ನು ಪಡೆಯಲು ಕಂದಾಯ ಇಲಾಖೆ ನೀಡುವ ಯುನಿಕ್ಯು ಆರ್.ಡಿ ಸಂಖ್ಯೆ, ಸಾಮಾನ್ಯವಾಗಿ ಆರ್.ಡಿ ಸಂಖ್ಯೆ ಎಂದು ಕರೆಯುವ ಆದಾಯ ಪ್ರಮಾಣಪತ್ರ ಡೇಟಾಬೇಸ್‍ನಿಂದ ಆದಾಯ ಮತ್ತು ಜಾತಿ ವಿವರಗಳನ್ನು ಪರಿಶೀಲಿಸಲು ಶಿಕ್ಷಣ ಇಲಾಖೆಯ ಡೇಟಾಬೇಸ್ ಸಂಯೋಜಿಸಬೇಕು ಎಂದರು.
 
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಸಲಹೆಗಾರರಾದ ಪ್ರಸನ್ನ, ವಿಶೇಷ ಕಾರ್ಯದರ್ಶಿ ರಮೇಶ್ ದೇಸಾಯಿ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by