ಕನ್ನಡ ನಾಡು | Kannada Naadu

ಬ್ಯಾಂಕುಗಳಲ್ಲಿ ಭಾಷಾ ಸೌಹಾರ್ದತೆಗೆ ಸಂಸತ್ತಿನಲ್ಲಿ ಒಕ್ಕೂರಲಿನಿಂದ ಆಗ್ರಹಿಸಿ ಕರ್ನಾಟಕ ಸಂಸದರಿಗೆ ಡಾ. ಪುರುಷೋತ್ತಮ ಬಿಳಿಮಲೆ ಮನವಿ

21 May, 2025

ಬೆಂಗಳೂರು : ಸ್ಥಳೀಯ ಗ್ರಾಹಕರ ಮೇಲೆ ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿಗಳು ಮಾಡುವ ಭಾಷಾಪ್ರಹಾರವನ್ನು ತಡೆಯುವಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದು, ರಾಜ್ಯದ ಎಲ್ಲ ಸಂಸದರು ಸಂಸತ್ತಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಬೇಕೆಂದು ಆಗ್ರಹಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಈ ಕುರಿತಂತೆ ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲ ಸಂಸತ್ ಸದಸ್ಯರಿಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿಯನ್ನು ನೀಡಿರುವ ಬಿಳಿಮಲೆ, ಈ ರೀತಿಯ ಘಟನೆಗಳ ಪುನರಾವರ್ತನೆ ಕನ್ನಡಿಗರ ಆತ್ಮಸ್ಥೈರ್ಯವನ್ನು ಕದಡುತ್ತದೆ. ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಹ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹಕ್ಕೆ ಸಹಮತದ ನಿಲುವನ್ನು ವ್ಯಕ್ತಪಡಿಸಿದ್ದು, ಕಳೆದ ಡಿಸೆಂಬರ್ ನಲ್ಲಿ ಪ್ರಾಧಿಕಾರದ ನಿಯೋಗವು ತಮ್ಮನ್ನು ಭೇಟಿ ಮಾಡಿ ಕ್ರಮಕ್ಕೆ ಕೋರಿತ್ತು ಎಂಬುದನ್ನು ಸ್ಮರಿಸಿದ್ದಾರೆ. 

ಯಾವುದೇ ರಾಜ್ಯದ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಸ್ಥಳೀಯ ಭಾಷಾ ಜ್ಞಾನದ ಕುರಿತಂತೆ ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಬೇಕು, ಸ್ಥಳೀಯ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರಾಗಬೇಕು ಎಂಬ ಷರತ್ತನ್ನು ನೇಮಕಾತಿ ಸಂದರ್ಭದಲ್ಲಿ ವಿಧಿಸಬೇಕೆಂದು ಸಂಸತ್ತಿನಲ್ಲಿ ಆಗ್ರಹಿಸಲು ಸಂಸದರಿಗೆ ಮನವಿ ಮಾಡಿರುವ ಬಿಳಿಮಲೆ, ಇದು ಒಕ್ಕೂಟ ವ್ಯವಸ್ಥೆಗೆ ಗೌರವ ತರುವ ಕ್ರಮವಾಗಲಿದೆ ಎಂದಿದ್ದಾರೆ.


ಚಂದಾಪುರದ ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕಿ ವರ್ಗಾವಣೆ ಸ್ವಾಗತಾರ್ಹ


ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಪ್ರತಿಸ್ಪಂದಿಸಿ ಎಸ್ ಬಿ ಐ ಬ್ಯಾಂಕ್ ಚಂದಾಪುರದ ಸೂರ್ಯಸಿಟಿಯ ಶಾಖಾ ವ್ಯವಸ್ಥಾಪಕಿಯಾದ ಪ್ರಿಯಾಂಕಾ ಸಿಂಗ್ ಅವರನ್ನು ವರ್ಗಾಯಿಸಿರುವುದು ಸ್ವಾಗತಾರ್ಹವೆಂದಿರುವ ಬಿಳಿಮಲೆ, ಇಂತಹ ಘಟನೆಗಳು ಪುನಃ ನಡೆಯದ ರೀತಿಯಲ್ಲಿ ಇದು ಎಚ್ಚರಿಕೆಯ ಘಂಟೆಯಾಗಿದೆ. ಆದರೂ ಹೋರಾಟಗಳಿಲ್ಲದೆ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಂಕ್ ಸಿಬ್ಬಂದಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮೂಡಿದರೆ ಸಾಮಾಜಿಕ ಸಾಮರಸ್ಯ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕುಗಳು ಕಾರ್ಯ ನಿರ್ವಹಿಸಬೇಕೆಂದು ಆಗ್ರಹಿಸಿದ್ದಾರೆ. ಎಸ್ ಬಿ ಐ ಪ್ರಧಾನ ವ್ಯವಸ್ಥಾಪಕರಿಗೆ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ ಎಂದಿರುವ ಬಿಳಿಮಲೆ ಇಂತಹ ಘಟನೆಗಳು ಮರು ಕಳುಹಿಸದಂತೆ ಕ್ರಮವಹಿಸಬೇಕಾಗಿ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by