ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ವಿಭಾಗ ಹಾಗೂ ಅಖಿಲ ಭಾರತ ಸುಸಂಘಟಿತ ಜೇನು ನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರ್ರಾಯೋಜನೆ ವತಿಯಿಂದ ಜಿ.ಕೆ.ವಿ.ಕೆಯಲ್ಲಿ ಇಂದು ಹಮ್ಮಿಕೊಳ್ಳಲಾದ “ವಿಶ್ವ ಜೇನು ದಿನಾಚರಣೆ ಹಾಗೂ ಮಧುಮೇಳ”ವನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ, ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೇವಲ ಕೃಷಿಯಿಂದ ಮಾತ್ರ ರೈತರು ಆರ್ಥಿಕವಾಗಿ ಸಬಲೀಕರಣವಾಗಲು ಸಾಧ್ಯವಿಲ್ಲ. ಪೂರಕ ಚಟುವಟಿಕೆಗಳಾದ ಜೇನು ಕೃಷಿಯಂತಹ ಉಪಕಸಬುಗಳನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯ. ಜೇನು ಕೃಷಿಯನ್ನು ಒಂದು ಉದ್ಯಮದ ರೀತಿ ಸ್ವೀಕರಿಸಿ ಗುಣಮಟ್ಟಕ್ಕೆ ಒತ್ತು ನೀಡಿದಾಗ ಮಾತ್ರ ಹೆಚ್ಚಿನ ಲಾಭ ಗಳಿಸಬಹುದು. ಕೃಷಿಯಲ್ಲಿ ಜೇನಿನ ನೊಣಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು ಪರಾಗಸ್ವರ್ಶದಿಂದ ಶೇ.40 ರಿಂದ 45 ರಷ್ಟು ಆಹಾರದ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.
ಜೈವಿಕ ವೈವಿಧ್ಯತೆಗೆ ಮೂಲ ಕಾರಣ ಜೇನು ಹಾಗೂ ಸುಮಾರು 80 ಜಾತಿಯ ಮರಗಳ ಪರಾಗಸ್ವರ್ಶಕ್ಕೆ ಜೇನು ನೊಣಗಳು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಜೇನು ಸಾಕಣೆ ನಶಿಸುತ್ತಿದ್ದು ಕೃಷಿಯಲ್ಲಿ ಹೆಚ್ಚು ಹೆಚ್ಚು ರಾಸಾಯನಿಕಗಳ ಬಳಕೆ ಆಗುತ್ತಿರುವುದು ಪ್ರಮುಖ ಕಾರಣವಾಗಿದೆ. ಆದುದರಿಂದ ಅಗತ್ಯವಾದಾಗ ಮಾತ್ರ ರಾಸಾಯನಿಕಗಳ ಬಳಕೆ ಮಾಡಿ ಸುಸ್ಥಿರ ಕೃಷಿಗೆ ಮುಂದಾಗಬೇಕು. ಸಕ್ಕರೆÀ ಬದಲಿಗೆ ಜೇನು ತುಪ್ಪವನ್ನು ಬಳಸುವ ಹೆಚ್ಚಿನ ಸಂಶೋಧನೆಗಳಾಗಬೇಕು. ಹೆಚ್ಚುತ್ತಿರುವ ನಗರೀಕರಣದಲ್ಲಿ ಜೇನು ಕೃಷಿಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ ಮನೆಗಳತಾರಸಿಯಲ್ಲಿ ಜೇನು ಸಾಕಾಣೆ ಮಾಡಲು ಪ್ರೋತ್ಸಾಹಿಸಬೇಕು. ವಿಶ್ವ ಜೇನು ದಿನಾಚರಣೆ ಹಾಗೂ ಮಧುಮೇಳವು ರೈತರು, ಸಂಶೋಧಕರು ಹಾಗೂ ಉದ್ಯಮದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕರಾದ ಡಾ: ಹೆಚ್.ಎಸ್. ಶಿವರಾಮು, ಡೀನ್(ಕೃಷಿ) ಡಾ: ಎನ್.ಬಿ. ಪ್ರಕಾಶ್, ಡೀನ್ (ವಿದ್ಯಾರ್ಥಿಕಲ್ಯಾಣ ಮತ್ತು ಮುಖ್ಯಸ್ಥರುಜೇನು ಕೃಷಿ ವಿಭಾಗ) ಡಾ: ಮೋಹನ್.ಐ.ನಾಯಕ್, ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಜೇನು ಕೃಷಿಯಲ್ಲಿ ಯಶಸ್ವಿಯಾದ ರೈತ / ಉದ್ದಿಮೆದಾರರನ್ನು ಸನ್ಮಾನಿಸಲಾಯಿತು ಹಾಗೂ 250ಕ್ಕೂ ಹೆಚ್ಚು ಆದಿವಾಸಿಗಳಿಗೆ ಜೇನು ಪೆಟ್ಟಿಗೆಯನ್ನು ವಿತರಿಸಲಾಯಿತು.
Publisher: ಕನ್ನಡ ನಾಡು | Kannada Naadu