ಬೆಂಗಳೂರು : ವಿಧಾನಸಭೆಯ ಸದಸ್ಯರಾಗಿದ್ದ, ಭೂಸುಧಾರಣೆ, ವಾರ್ತಾ ಮತ್ತು ಇಂಧನ ರಾಜ್ಯ ಸಚಿವರಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿ ಅವರು ದಿನಾಂಕ: 10-3-2025ರಂದು ನಿಧನ ಹೊಂದಿರುವ ವಿಷಯವನ್ನು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಫರೀದ್ ಅವರು ಸದನದಲ್ಲಿ ತಿಳಿಸಿ ಸಂತಾಪವನ್ನು ವ್ಯಕ್ತಪಡಿಸಿದರು.
ಸುಬ್ಬಯ್ಯ ಶೆಟ್ಟಿ ಅವರು 4ನೇ ಏಪ್ರಿಲ್ 1934ಲ್ಲಿ ಮಂಗಳೂರಿನಲ್ಲಿ ಜನಿಸಿದ ಇವರು ಬಿ.ಎಸ್ಸಿ, ಬಿಎಲ್ ಪದವೀಧರರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. 1956-65ರ ಅವಧಿಯಲ್ಲಿ ಇಂಡೋ-ಟಿಬೇಟಿಯನ್ ಬಾರ್ಡರ್ ಪೋರ್ಸ್ನ ಇಂಟಲಿಜೆನ್ಸ್ ಬ್ಯೂರೂ ಸದಸ್ಯರಾಗಿದ್ದರು. ಗಲ್ವಾನ್ ಹಾರ್ಸ್ ಸ್ಟ್ರಿಂಗ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಚೀನಾ ದೇಶವು ಭಾರತದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ಇಂಡೂ-ಟಿಬೇಟಿಯನ್ ಬಾರ್ಡರ್ ಪೋರ್ಸ್ ಮತ್ತು ಲಡಾಖ್ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಿದ್ದರು. ಇವರು ಪರ್ವತಾರೋಹಿಯಾಗಿದ್ದರು. 1972ರಲ್ಲಿ ನಡೆದ ಚುನಾವಣೆಯಲ್ಲಿ ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು 5ನೇ ವಿಧಾನಸಭೆಯಲ್ಲಿ ಪ್ರವೇಶಿಸಿ, 6ನೇ ವಿಧಾನಸಭೆಗೆ ಅದೇ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು.
ಸುಬ್ಬಯ್ಯ ಶೆಟ್ಟಿ ಅವರ ನಿಧನಕ್ಕೆ ಗೃಹಸಚಿವರು ಬೆಂಬಲ ವ್ಯಕ್ತಪಡಿಸಿ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸುತ್ತಾ ಸುಬ್ಬಯ್ಯ ಶೆಟ್ಟಿ ಅವರು ರಾಷ್ಟ್ರದಲ್ಲಿ ರಾಜ್ಯದಲ್ಲಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಭೂ ಸುಧಾರಣೆ, ವಾರ್ತಾ ಮತ್ತು ಇಂಧನ ರಾಜ್ಯ ಸಚಿವರಾಗಿ ಹಾಗೂ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ಭೂ ಸುಧಾರಣೆ ಮೂಲಕ ಉಳುವವನೆ ಹೊಲದೊಡೆಯ ಕಾನೂನು ಜಾರಿಗೆ ಬಂದಾಗ ಭೂ ಸುಧಾರಣಾ ಸಚಿವರಾಗಿದ್ದರು. ಡಿ.ದೇವರಾಜು ಅರಸು, ಶಾಂತವೇರಿ ಗೋಪಾಲಗೌಡ, ಡಾ: ದ.ರಾ.ಬೇಂದ್ರೆ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ದಿ: ದೇವರಾಜು ಅರಸುರವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಭೂ ಸುಧಾರಣೆ ಕಾಯ್ದೆ ತರುವ ಸಂದರ್ಭದಲ್ಲಿ ಕ್ರಾಂತಿಕಾರಿ ತೀರ್ಮಾನ ಮಾಡುವ ನಿಟ್ಟಿನಲ್ಲಿ ಇವರು ಕ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರು ಸುಬ್ಬಯ್ಯ ಶೆಟ್ಟಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಾ, ಸುಬ್ಬಯ್ಯ ಶೆಟ್ಟಿ ಅವರು ಭೂ ಸುಧಾರಣೆ ಕಾಯ್ದೆ ಬಗ್ಗೆ ಹೋರಾಟ ಮಾಡಿದವರು. ವಾರ್ತಾ, ಇಂಧನ ಮತ್ತು ಶಿಕ್ಷಣ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸರಳಜೀವಿ ಹಾಗೂ ನಿರರ್ಗಗಳವಾಗಿ ಮಾತನಾಡುವ ಚಾಕಾಚಕ್ಯತೆ ಹೊಂದಿದ್ದರು. ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ ಎಂದು ತಿಳಿಸಿ ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು.
Publisher: ಕನ್ನಡ ನಾಡು | Kannada Naadu