ಬೆಂಗಳೂರು: ಇನ್ನೂ ಮುಂದೆ ಕೇವಲ 2 ಗಂಟೆಯಲ್ಲಿ ಬೆಂಗಳೂರಿ ನಿಂದ ಹೈದರಾಬಾದ್ ಪ್ರಯಾಣ ಮಾಡಬಹುದು. ಇಂಥದೊಂದು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಭಾರತಕ್ಕೆ ಬರುತ್ತಿರುವ ಹೈಸ್ಪೀಡ್ ಬುಲೆಟ್ ರೈಲು ಎರಡೂ ನಗರವನ್ನು ಕೇವಲ 2 ಗಂಟೆಯಲ್ಲಿ ಸಂಪರ್ಕಿಸಲು ಮುಂದಾಗಿದೆ.
ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಅಂತರ 618 ಕಿ.ಮೀ ಇದೆ. ಈ ಎರಡು ಐಟಿ ನಗರಗಳ ನಡುವೆ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಅದಕ್ಕೆ ಕೆಲವರು ಸ್ವಂತ ಕಾರು, ಇನ್ನು ಕೆಲವರು ಬಸ್ಸುನಲ್ಲಿ, ಇನ್ನು ಕೆಲವರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇದನ್ನು ಹೊರತು ಪಡಿಸಿದರೆ ವಿಮಾನ ಮಾರ್ಗವನ್ನು ಬಳಸುವವರು ಇದ್ದಾರೆ. ರೈಲು ಬಸ್ಸು ಪ್ರಯಾಣಕ್ಕೆ ಹೆಚ್ಚುಕಮ್ಮಿ 12 ಗಂಟೆಗಳು ಬೇಕಾಗುತ್ತದೆ. ವೇಗದ ಪ್ರಯಾಣಕ್ಕೆ ವಿಮಾನವೇ ಆಸರೆ. ವಿಮಾನದಲ್ಲೂ ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಂತೇಯೆ ಬಲು ದುಬಾರಿಯ ಪ್ರಯಾಣವು ಹೌದು. ಐಟಿ ವೃತ್ತಿಪರರು ಮತ್ತು ವ್ಯಾಪಾರಿಗಳು ಮಾತ್ರ ವಿಮಾನ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯ ಜನರು ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಬೇಕಾಗುವ ಸ್ಥಿತಿ ಇದೆ.
ಪರಸ್ಥಿಯನ್ನು ಅರಿತ ಕೇಂದ್ರ ಸರ್ಕಾರ ಉಭಯ ಐಟಿ ನಗರಗಳ ನಡುವೆ ಗಂಟೆಗಟ್ಟಲೆ ಪ್ರಯಾಣಿಸುವ ಪ್ರಯಾಣಿಕರಿಗೆ ಖುಷಿಯ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ದೇಶದ ಅತಿವೇಗದ ಬುಲೆಟ್ ರೈಲ ಆರಂಭಿಸಲು ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ಇದರೊಂದಿಗೆ ಅಹಮದಾಬಾದ್ ಮತ್ತು ಮುಂಬೈ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಇದರೊಂದಿಗೆ ಚೆನ್ನೈ, ಮುಂಬೈಗೂ ಬುಲೆಟ್ ರೈಲು ಯೋಜನೆಯನ್ನು ರೂಪಿಸುವ ಯೋಜನೆಯನ್ನು ಹೊಂದಿದೆ. ವಾಸ್ತವದಲ್ಲಿ ಈ ಯೋಜನೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು. ಆದರೆ, ಒಮ್ಮೆ ಬುಲೆಟ್ ರೈಲು ಓಡಲು ಆರಂಭಿಸಿದರೆ, ಈ ನಗರಗಳ ನಡುವಿನ ಪ್ರಯಾಣದ ಸಮಯವು ವಿಮಾನ ಪ್ರಯಾಣದಷ್ಟೇ ವೇಗವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲ್ನ್ನು ಸದ್ಯ ನಮ್ಮ ದೇಶದ ಅತೀ ವೇಗವಾಗಿ ಚಲಿಸುವ ರೈಲು ಎಂದು ಗುರುತಿಸಲಾಗಿದೆ. ಅದು ಪ್ರತಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಸದ್ಯ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಬುಲೆಟ್ ರೈಲಿನ ವೇಗ ಗಂಟೆಗೆ 300 ಕಿ.ಮೀ ಇರಲಿದೆ ಎಂದು ತಿಳಿಸಿದ್ದಾರೆ. ಅದಕ್ಕಾಗಿ ಜಪಾನ್ ದೇಶದಲ್ಲಿ ಬಳಸಿದ ತಂತ್ರಜ್ಞಾನವನ್ನು ಅಲ್ಲಿನ ತತ್ರಜ್ಞರ ಸಹಾಯದಿಂದ ಭಾರತದಲ್ಲಿ ಕೆಲಸ ಮಾಡಲು ಯೋಜಿಸಲಾಗಿದೆ. ಬಹುತೇಕ 2028-29ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ಅಂದಾಜು ಮಾಡಲಾಗಿದೆ.
ನಿಯೋಜಿತ ಬುಲೆಟ್ ರೈಲು ಗಂಟೆಗೆ 350 ಕಿ.ಮೀ. ವೇಗದಲ್ಲಿ ಚಲಿಸಿದರೆ, ಮುಂಬೈಯಿಂದ ಅಹಮದಾಬಾದ್ಗೆ ಕೇವಲ ಒಂದು-ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ. ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ನಡುವೆ 618 ಕಿ.ಮೀ ಮಾರ್ಗವನ್ನು ಈ ಹೈ ಸ್ಪೀಡ್ ರೈಲಿನಲ್ಲಿಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸಿದಾಗ ಕೇವಲ 2 ಗಂಟೆಗಳಲ್ಲಿ ತಲುಪ ಬಹುದಾಗಿದೆ. ಈ ಮಾರ್ಗವು 2041ರ ವೇಳೆಗೆ ಜನರ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಯಲ್ಲಿ ಹೈದರಾಬಾದ್ ಮತ್ತು ಮುಂಬೈ ನಡುವೆಯೂ ಬುಲೆಟ್ ರೈಲು ಆರಂಭಿಸಲು ಪ್ರಸ್ತಾವಿಸಲಾಗಿದೆ. ಈ ಎರಡು ನಗರಗಳ ನಡುವಿನ ಅಂತರ 711 ಕಿ.ಮೀ. ಇದ್ದು ಈ ಮಾರ್ಗವನ್ನು ನಿರ್ಮಾಣ ಮಾಡುವ ಯೋಜನೆ ರೂಪಗೊಳ್ಳುತ್ತಿದೆ. ಈ ಯೋಜನೆಯು ಸುಮಾರು 2051ರಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಸುಮಾರು ಎರಡು-ಎರಡೂವರೆ ಗಂಟೆಗಳಲ್ಲಿ ಹೈದ್ರಾಬಾದ್ - ಮುಂಬೈ ಗೆ ಪಯ್ರಾಣಿಸಬಹುದಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಈಗಾಗಲೇ ಈ ಯೋಜನೆಯ ಕೆಲವು DPR ಹಂತದಲ್ಲಿ ಇದ್ದು, ಇನ್ನೂ ಕೆಲವು ಪ್ರಸ್ತಾವಿತ ಹಂತದಲ್ಲಿವೆ. ಪ್ರಧಾನಿ ʻಘತಿ ಶಕ್ತಿ ಯೋಜನೆಯಡಿʼ ಈ ಹೈಸ್ಪೀಡ್ ರೈಲು ಯೋಜನೆ ಕಾರ್ಯಗತಗೊಳ್ಳಲಿದೆ. ಭಾರತ ಈ ಮಹತ್ವಾಕಾಂಕ್ಷಿ ಯೋಜನೆಗೆ ಬರೋಬ್ಬರಿ 30,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಕಾಯ್ದಿರಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Publisher: ಕನ್ನಡ ನಾಡು | Kannada Naadu