ಆಲಮೇಲ: ಕರ್ನಾಟಕ ಸಂಭ್ರಮ 50 ರ ಸವಿನೆನಪಿನಲ್ಲಿ ಕರ್ನಾಟಕ ಸರ್ಕಾರ ಆಲಮೇಲ ತಾಲೂಕಾಡಳಿತದಿಂದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರನ್ನು "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ಪತ್ರ ನೀಡಿ ತಹಶೀಲ್ದಾರ ಕೆ.ವಿಜಯಕುಮಾರ ಸನ್ಮಾನಿಸಿದರು.
ಶುಕ್ರವಾರ ತಹಶೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರರಂಗದ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ಪತ್ರ ನೀಡಿ ಸಾಧಕರೆಂದು ಗುರುತಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಅರವಿಂದ ಅಂಗಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ ಪಠಾಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ನಾಯಕ, ತಾಲೂಕು ನೌಕರರ ಸಂಘದ ತಾಲೂಕಾಧ್ಯಕ್ಷ ರವಿ ಬಿರಾದಾರ, ಕಸಾಪ ತಾಲೂಕಾಧ್ಯಕ್ಷ ಶಿವಶರಣ ಗುಂದಗಿ, ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ ಪಿ ಎಸ್ ಮೂಕಿಹಾಳ, ಪ್ರದಸ ಎನ್ ಪಿ ದಶವಂತ, ಕಂದಾಯ ನಿರೀಕ್ಷಕ ಎಮ್ ಎ ಅತ್ತಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಎಮ್ ಕೆ ಪೂಜಾರಿ, ಅನೀಲ ಅವಜಿ, ಭೀಮಣ್ಣ ಜೇರಟಗಿ, ವಿನೋದ ಭೀಸೆ, ಡಾ.ಸಮೀರ ಹಾದಿಮನಿ, ಸೇರಿದಂತೆ ಅನೇಕರಿದ್ದರು. ರವಿ ಹೊಸಮನಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ನಿರೂಪಿಸಿದರು. ಅಪ್ಪು ಶೆಟ್ಟಿ ವಂದಿಸಿದರು.
ವಿಶ್ವಪ್ರಕಾಶ ಟಿ ಮಲಗೊಂಡ ಮೂಲತಃ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಗುಂದಗಿ ಗ್ರಾಮದವರಾಗಿದ್ದು, ಹಲವಾರು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದು, ಸುಮಾರು ಇಪ್ಪತ್ತು (20) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿಯೇ ಬಾಲ ನಟನಾಗಿ ಅಭಿನಯಿಸಿದ್ದು ಇವರು ಒಬ್ಬರೇ. ಇವರ ಸಾಧನೆಗೆ ಅತ್ಯುತ್ತಮ ನಟ ಎನ್ನುವ ಪ್ರಶಸ್ತಿ ಕೂಡ ಲಭಿಸಿದೆ. ಸಾಮಾಜಿಕ ಕಳಕಳಿ ಭಾವೈಕ್ಯತೆಯ ಸಂದೇಶ ಸಾರುವ ಹಲವು ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.
Publisher: ಕನ್ನಡ ನಾಡು | Kannada Naadu