ಕನ್ನಡ ನಾಡು | Kannada Naadu

ನರಗುಂದದ ಬಂಡಾಯ... ರಾಮದುರ್ಗದ ದುರಂತ.. ಎಂದಿದ್ದೇ ʻಕನ್ನಡಮ್ಮʼ  

22 Jul, 2024

 
 
 ಬರೋಬ್ಬರಿ 44 ವರ್ಷಗಳ ಹಿಂದಿನ ಕಥೆ..! ರಾಜ್ಯದಲ್ಲಿ ದಿ.ಗುಂಡೂರಾವ ನೇತ್ರತ್ವದ ಸರಕಾರ ಅಸ್ಥಿತ್ವದಲ್ಲಿಇದ್ದಕಾಲವದು.  ಆಗ ಧಾರವಾಡ ಜಿಲ್ಲೆಯ ನರಗುಂದದಲ್ಲಿ ಗೋಳಿಬಾರ್ ನಡೆದು ಹೊಗಿತ್ತು. ಅದಕ್ಕೆ ಕಾರಣ  ರೈತರ ಮೇಲೆ  ಅಂದಿನ ಸರಕಾರ  ಹಾಕಿದ್ದ ಬೆಟರ್ ಮೆಂಟ್ ತೆರಿಗೆಯಾಗಿತ್ತು. 

   1980ರಲ್ಲಿ ಸರ್ಕಾರದ ವಿರುದ್ಧ ನಡೆದ ರೈತ ಬಂಡಾಯದ ನಿಮಿತ್ತ ಹುತಾತ್ಮ ರೈತ ʻವೀರಪ್ಪ ಕಡ್ಲಿಕೊಪ್ಪರʼ ವೀರಗಲ್ಲು ಬಳಿ ಬಂದು ನಿಂತಾಗ ಏನೆಲ್ಲಾ ಕಥೆಗಳು ಒಮ್ಮೆ ನನ್ನ ನೆನಪಿಗೆ ಬಂದು ಹೋದವು. ವಾಸ್ತವದಲ್ಲಿ ಆ ಬಂಡಾಯವನ್ನು ನಾನು ಕಣ್ಣಾರೆ ಕಾಣದಿದ್ದರೂ ನನಗೆ ಸಚಿತ್ರ ವರದಿಯನ್ನು ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟವರು ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ʻಅಶೋಕ ಚಂದರಗಿʼ ಅವರು.  ʻಚಂದರಗಿʼ ಅವರು ಗಡಿನಾಡು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ರಚಿಸಿಕೊಂಡು ಗಡಿಯಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡುತ್ತ ಬಂದವರು. ನಾನು ಬೆಳಗಾವಿಯಲ್ಲಿ ಪತ್ರಕರ್ತನಾಗಿದ್ದ ಕಾಲದಿಂದಲೂ ಅವರ ಒಡನಾಟ, ಮಾರ್ಗದರ್ಶನ ಹೊಂದಿದ್ದವನು. ನಾಡು ನುಡಿ ಕುರಿತ ಅದೇಷ್ಟೋ ಸಂಗತಿಗಳನ್ನು ಅವರಿಂದ ನಾನು ತಿಳಿದುಕೊಂಡಿದ್ದೇನೆ. 
 ʻʻನರಗುಂದದ ರೈತ ಬಂಡಾಯವನ್ನು ವರದಿಮಾಡಲು ನಡೆದುಕೊಂಡೇ ಹೋದೆʼʼ ಎಂದಾಗ ನಾನು ಅವರ ಮುಖವನ್ನೆ ನೋಡುತ್ತಿದ್ದೆ.. ಘಟಣೆ ವಿವರಿಸುತ್ತಿದ್ದ ಅಶೋಕಣ್ಣ ಅವರು ಅಕ್ಷರಶಃ  ಅಕ್ಷರ ಸಂತರಂತೆ ನನಗೆ ಕಂಡಿದ್ದರು. ʻʻ1980 ರ ಜಲೈ 21 ರಂದು ಅಂದಿನ ಧಾರವಾಡ ಜಿಲ್ಲೆಯ ನರಗುಂದ, ನವಲಗುಂದ ಹಾಗೂ ಜುಲೈ 22 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ರೈತರ ಬಂಡಾಯಕ್ಕೆ ಈಗ ನಾಲ್ಕು ದಶಕಗಳು ಸಂದಿ ಹೋದವುʼʼ ಎಂದ ಚಂದರಗಿ ಅವರು ಅಂದಿನ ಸಾಲು ಸಾಲು ನೆನಪುಗಳನ್ನು ವಿವರಿಸಿದರು. 
 1980ರ ಜುಲೈ 21 ರಂದು ನರಗುಂದದಲ್ಲಿ ರೈತರ ಮತ್ತು ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಎರಡೂ ಕಡೆ ಸಾವು ನೋವುಗಳು ಸಂಭವಿಸಿದವು. ಅದರ ಮಾರನೇ ದಿನವೇ ಅಂದರೆ ಜುಲೈ 22 ರಂದು ರೈತರ ಸಮಸ್ಯೆಗಳ ಕುರಿತು ಮಾಹಿತಿ ಕಲೆಹಾಕಲು
ಸವದತ್ತಿ ಬಳಿಯ ನವಿಲುತೀರ್ಥದಿಂದ ಬೆಳಂಬೆಳಗ್ಗೆ ಹೊರಟು ನಿಂತಿದ್ದರಂತೆ. ಬರೋಬ್ಬರಿ ಹನ್ನೊಂದರ ಆಸುಪಾಸು.. ರಾಮದುರ್ಗದಲ್ಲಿ ಗೋಳಿಬಾರ್ ನಡೆದಿತ್ತು. ಆ ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ, ಈ ಸುದ್ದಿ ನವಿಲುತೀರ್ಥದ ಡ್ಯಾಮ್‌ನ ಸುತ್ತ ಮುತ್ತ ಗುಸುಗುದು ಆಗಲು ಶುರುವಾಗಿತ್ತು. ಪುರುಸೋತ್ತು ಮಾಡದೆ, ಅದೇ ಸಮಯಕ್ಕೆ ಬಂದ ಸವದತ್ತಿ ಬಸ್‌ ಹತ್ತಿಯೇ ಬಟ್ಟರಂತೆ. ಬಸ್‌ ಎಲ್ಲಿಗೆ ಹೊವುದು ಎಂದು ಆಮೇಲೆ ವಿಚಾರಿಸಿದಾಗ ಮತ್ತೇನೋ ಜುಗಾಡ ಮಾಡಿ ರಾಮದುರ್ಗದ ಬಸ್‌ ಹಿಡಿದು 2 ಗಂಟೆಯ ಸುಮಾರಿಗೆ ಹೊರಟಿದ್ದರಂತೆ. ಶಿರಸಂಗಿಯವರೆಗೆ ಹೋದ ಬಸ್‌ ಮುಂದೆ ಸಾಗುವುದು ಕಷ್ಟ ಎಂದು ನಿಂತು ಬಿಟ್ಟಿತ್ತಂತೆ.  ಬಸ್‌ ಅಲ್ಲಿಗೆ ನಿಲ್ಲಿಸಲು ಮುಖ್ಯ ಕಾರಣ  ರಾಮದುರ್ಗ ಗೋಳಿಬಾರ್..! ಅಲ್ಲಿ ಒಬ್ವ ಸತ್ತಿದ್ದು, ಗಾಯಗೊಂಡವರನ್ನು ಹುಬ್ಬಳ್ಳಿಯ ಕೆ.ಎಮ್. ಸಿ ಆಸ್ಪತ್ರೆಗೆ  ಒಯ್ಯಲಾಗುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ  ಹಬ್ಬಿತ್ತು. ಪರಿಣಾಮ ಚಂದರಗಿ ಅವರು ಇದ್ದ ಬಸ್ ಚಾಲಕ ಮುಂದೆ ಸಾಗಲು ಸಾಧ್ಯವೇ ಇಲ್ಲ ಎಂದು ಕಟ್ಟಿ ತುಂಡು ಮಾಡಿದಂತೆ ಹೇಳಿ ಬಿಟ್ಟಿದ್ದನಂತೆ. 

        ಇನ್ನೇನು ರಾಮದುರ್ಗಕ್ಕೆ ಹೋಗಿ ಅಲ್ಲಿನ ವರದಿ ಮಾಡಲೇಬೇಕು.. ಅದಕ್ಕೆ ಅಲ್ಲಿಯೇ ಇದ್ದ ನಾಲ್ಕಾರು ಜನರಿಗೆ ಹುರುಪು ತುಂಬಿ ರಾಮದುರ್ಗಕ್ಕೆ ನಡೆದುಕೊಂಡೇ ಹೊರಟರಂತೆ..! ಮುಳ್ಳೂರು ಗುಡ್ಡವನ್ನು ಏರಿ, ಇಳಿದು ರಾಮದುರ್ಗ ತಲುಪಿದಾಗ ಬರೋಬ್ಬರಿ ಸಂಜೆ  6 ಗಂಟೆ..!  ಅಲ್ಲಿಗೆ ತರಳಿ ಮಾಹಿತಿಯನ್ನು ಕಲೆಹಾಕಿದಾಗ ತಿಳಿದು ಬಂದಿದ್ದು, ರಾಮದುರ್ಗ ಬಸ್ ನಿಲ್ದಾಣದ ಬಳಿಯಲ್ಲಿದ್ದ ಉಗ್ರಾಣವೊಂದನ್ನು ಲೂಟಿ ನಡೆಸಲು ಮುಂದಾದಾಗ ಆ ಗೋಳಿಬಾರ್ ನಡೆದಿತ್ತು ಎನ್ನುವದು. ಆ ಘಟನೆಯಲ್ಲಿ  ಒಬ್ಬ ಸಾವನ್ನಪ್ಪಿದ್ದ, ಬೆಳಗಾವಿಯ ಅಂದಿನ ಎಸ್.ಪಿ. ಯಾಗಿದ್ದ ಟಿ. ಮಡಿಯಾಳ ಅವರು ತಮ್ಮ ಬಿಳಿ ಬಣ್ಣದ ಎಂಬಾಸಿಡರ್‌ನಲ್ಲಿ ಆಗ ತಾನೆ ರಾಮದುರ್ಗಕ್ಕೆ ಬಂದಿಳಿದಿದ್ದರಂತೆ.  ಚಂದರಗಿ ಅವರನ್ನು ಕಂಡವರೆ.. " ಅಶೋಕ ಅವರೆ..ಇದೇನಿದು..?   ನಾನೇ  ಈಗ ಬರ್ತಾ ಇದ್ದೇನೆ ನೀನು ಆಗಲೇ ಇಲ್ಲಿಗೆ ಬಂದು ಬಿಟ್ಟಿದ್ದಿರಾ...? ಅದೇಷ್ಟೊತ್ತಿಗೆ ನೀವು  ಬೆಳಗಾವಿ ಬಿಟ್ಟಿದ್ರಿ..? ಹ್ಯಾಂಗೆ ಬಂದ್ರಿ ಇಷ್ಟು ಬೇಗ ..!?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರಂತೆ.  ಆಗ ಅಶೋಕ ಚಂದರಗಿಯವರಿಗೆ ನಡೆದುಕೊಂಡು  ಬಂದಿರುವದರಿಂದ ಆಗಿದ್ದ ಆಯಾಸ ಅಕ್ಷರಶಃ ಕಡಿಮೆಯಾಗಿತ್ತು ಎಂದು ಹೇಳುತ್ತಾರೆ. ಎಸ್‌.ಪಿ ಸಾಹೇಬ್ರ ಪ್ರಶ್ನೆಗೆ ಉತ್ತರಿಸಿದ ಅಶೋಕ ಅವರು "ನಡೆದುಕೊಂಡ ಬಂದೆ.."ಎಂದು ತಿಳಿಸಿದಾಗ ಮಾತೇ ಆಡದೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ಸುಮ್ಮನಾಗಿ ಬಿಟ್ಟಿದ್ದರಂತೆ..
  ಆ ಕಾಲಕ್ಕೆ ʻಕನ್ನಡಮ್ಮʼ ದಿನಪತ್ರಿಕೆ ನಾಡಿನಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಹಾಗೇಯೆ ಇಂದು ರಾಜ್ಯಮಟ್ಟದ ಪ್ರಮುಖ ಪ್ರತಿಕೆಯಲ್ಲಿ ʻಕೀ ಪೋಜಿಶನ್‌ನಲ್ಲಿ ಇದ್ದವಲ್ಲಿ ಬಹುಪಾಲು ಅಲ್ಲಿ ಕೆಲಸ ಮಾಡುತ್ತಿದ್ದರೇ. ಕನ್ನಡಮ್ಮ ಪತ್ರಿಕೆಯ ಸಂಪಾದಕ ʻಎಮ್.ಎಸ್.ಟೋಪಣ್ಣವರಿಗೆʼ ಫೋನ್ ಮಾಡಿ ವರದಿ ಮಾಡಬೇಕಾಗಿದ್ದ ಜವಾಬ್ದಾರಿ ಅಶೋಕ ಚಂದರ್ಗಿಯವರದಾಗಿತ್ತು.  ರಾಮದುರ್ಗದಲ್ಲಿದ್ದ ಅವರ ಮನೆಯ ಹತ್ತಿರವಿದ್ದ ʻಪಾಂಡುರಂಗʼ ಚಿತ್ರಮಂದಿರದ ಮಾಲಿಕರಾದ ʻಶರಬಣ್ಣ ಆರಿʼಯವರ ಮನೆಗೆ ಹೋಗಿ ಅವರ ಮೆನೆಯಲ್ಲಿ ಇದ್ದ ಸ್ಥಿರ ದೂರವಾಣಿಯಿಂದ ಬೆಳಗಾವಿಯ ಕನ್ನಡಮ್ಮ ಪತ್ರಕೆಯ ಕಾರ್ಯಾಲಯಕ್ಕೆ ಟ್ರಂಕ್‌ ಕಾಲ್‌ ಬುಕ್‌ ಮಾಡಿ ಕಾಯಬೇಕಿತ್ತಂತೆ. ಅಂದಿನ ಕನ್ನಡಮ್ಮ ಪತ್ರಿಕೆಯ ದೂರವಾಣಿ ಸಂಖ್ಯೆ  23804ಗೆ ಸಂಜೆ 7 ರ ಸುಮಾರಿಗೆ ʻಅರ್ಜಂಟ್‌ ಕಾಲ್‌ʼ ಎಂದು ಕರೆಬುಕ್ ಮಾಡಿದರೆ ರಾತ್ರಿ 8 ರ ಸುಮಾರಿಗೆ ಕರೆ ಸಿಗುತ್ತಿತ್ತಂತೆ. ಆ ಕಡೆಯಿಂದ ಸಂಪಾದಕರು ʻʻಹಲೋʼʼ ಎಂದಾಗ.. ʻʻನಾನು ಅಶೋಕ.. ರಾಮದುರ್ಗದಿಂದʼʼ ಎಂದಾಗ  ಸಂಪಾದಕರಿಗೆ ಅಚ್ಚರಿಯೋ ಅಚ್ಚರಿಯಂತೆ.. ! "ಅಶೋಕಾ ನೀನು ಮುನವಳ್ಳಿ ಡ್ಯಾಮ್‌ಗೆ ಹೊಗಿದ್ದಿ.. ಮತ್ತ ರಾಮದುರ್ಗ ದಿಂದ ಗೋಳಿಬಾರ್‌ ಸುದ್ದಿ ಕೊಡಾಕಹತ್ತಿಯಲ್ಲ.. ಏನಪ್ಪಾ ಇದು .. ?" ಎಂದು ಪ್ರಶ್ನೆ ಮಾಡಿದ್ದರಂತೆ. ಅದಕ್ಕೆ ಒಂದೇ ಉಸಿರಿನಲ್ಲಿ ಉತ್ತರಿಸಿದ ಚಂದರಗಿಯವರು  ನಡೆಸ ಎಲ್ಲಾ ಸಂಗತಿಗಳನ್ನು ವಿವರಿಸಿದ್ದರಂತೆ. 
  ಸುದ್ದಿಯಂತು ಕೊಟ್ಟಾಯಿತು.. ರಾಮದುರ್ಗ ಸಂಪೂರ್ಣ ಬಂದ ಇದೆ. ಕಾರಣ ಆಗಲೇ ರಾಮದುರ್ಗದಲ್ಲಿ  ಕರ್ಫ್ಯೂ ಹಾಕಲಾಗಿತ್ತು. ಯಾವುದೇ ವಾಹನ ಬರುವಂತಿಲ್ಲ.. ಯಾವುದೇ ವಾಹನ ಹೊಗುವಂತಿಲ್ಲ.. ಎನ್ನುವ ಪೊಲೀಸರ ಫರ್ಮಾನು. ಇಂಥ ಸ್ಥಿತಿಯಲ್ಲಿ ರಾಮದುರ್ಗಕ್ಕೆ ಪತ್ರಿಕೆ ಹೇಗೆ ತರಿಸುವುದು..? ಎಂಬ ಚಾಲೇಂಜ್‌ ಅವರ ಮುಂದೆ ಬಂದಿತ್ತಂತೆ. 
      ಪತ್ರಿಕೆಯ ಬಂಡಲ್‌ನ್ನು ಬೆಳಗಾವಿಯಿಂದ ಬಾಗಲಕೋಟೆಗೆ ಹೋಗುವ ಬಸ್‌ಗೆ ಹಾಕುವಂತೆ ಮನವಿ ಮಾಡಿದ್ದರಂತೆ.  ಆ ಬಸ್‌ನಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ಯರಗಟ್ಟಿಯವರೆಗೆ ತಲುಪಿಸುವಂತೆ ಸಂಪಾದಕ ಟೋಪಣ್ಣನವರಿಗೆ ಮನವಿ ಮಾಡಲಾಗಿ, ಅದರಂತೆ ಅವರು ಆ ವ್ಯವಸ್ಥೆಯನ್ನು ಮಾಡಿದ್ದಂತೆ. ಆಗ ಅಶೋಕ ಚಂದರಗಿ ಅವರು ತನ್ನ ಚಿಕ್ಕಪ್ಪನ ಬುಲೆಟ್ ಬೈಕ್ ತೆಗೆದುಕೊಂಡು ಯರಗಟ್ಟಿಗೆ ಮುಂಜಾನೆಯೇ ಹೋಗಿ, 500 ಪತ್ರಿಕೆಗಳಿರುವ ಪೇಪರ್‌ ಬಂಡಲ್‌ನ್ನು ತನ್ನ ಬೈಕ್ ಹಿಂಭಾಗದ ಸ್ಟ್ಯಾಂಡಿಗೆ ಕಟ್ಟಿಕೊಂಡು ರಾಮದುರ್ಗಕ್ಕೆ ಬರುವರೆಗೆ ಬೆಳಿಗ್ಗೆ 9 ಗಂಟೆ ಯಾಗಿಬಿಡುತ್ತಿತ್ತಂತೆ. ಅಂದಿನ ಸ್ಥಿತಿ ಹೇಗಿತ್ತು ಎಂದರೆ ರಾಮದುರ್ಗಕ್ಕೆ ಬೇರೆ ಯಾವುದೇ ಪತ್ರಿಕೆ ಬರುತ್ತಿರಲಿಲ್ಲ. ಕಾರಣ ರಾಮದುರ್ಗ  ಕರ್ಫ್ಯೂನಿಂದ ಯಾರ ಸಂಪರ್ಕವೂ ಇರದ ದ್ವೀಪದಂತಾಗಿತ್ತು. ಅಂತಹ ಸ್ಥಿತಿಯಲ್ಲಿ ರಾಮದುರ್ಗದಲ್ಲಿ ʻಕನ್ನಡಮ್ಮʼನದ್ದೇ ಹವಾ...!  

  ಬಸ್‌ ಸ್ಟಾಂಡಿನಲ್ಲಿ ಬಿಸಿ ಬಿಸಿ ಬಜ್ಜಿ ಮಾರಿದಂತೆ ಒಂದೇ ತಾಸಿನಲ್ಲಿ ಎಲ್ಲ ಪತ್ರಿಕಗಳು ಮಾರಾಟವಾಗುತ್ತಿದ್ದವಂತೆ..! ಮುಂದೆ ಒಂದು ವಾರಗಳ ಕಾಲ ರಾಮದುರ್ಗದಿಂದ ಫೋನಿನಲ್ಲಿ ಸುದ್ದಿ ಕೊಡುವದು, ಮರುದಿನ ಬುಲೇಟ್‌ನಲ್ಲಿ ಯರಗಟ್ಟಿಗೆ ತರಳಿ ಅಲ್ಲಿಂದ  ಪತ್ರಿಕೆಯ ಬಂಡಲ್‌ ತಂದು ಓದುಗರಿಗೆ ತಲುಪಿಸುವುದು.. ಇದು ನಡೆದಿತ್ತಂತೆ. ಜುಲೈ 21 ರಂದು ನರಗುಂದಲ್ಲಿ ನಡೆದ ರೈತರ ಬಂಡಾಯದ ಸುದ್ದಿಗೆ  ʻನರಗುಂದದ ಬಂಡಾಯʼ ಎಂಬ ತಲೆಬರಹ ಕೊಟ್ಟಿದ್ದೆ ʻಕನ್ನಡಮ್ಮʼ ಪತ್ರಿಕೆ ಎಂದು ಅಶೋಕ ಚಂದರಗಿ ಅವರು ಹೆಮ್ಮೆಯಿಂದ ಹೇಳುತ್ತಾರೆ. ಅಂತೇಯೆ ಜುಲೈ 22 ರ ರಾಮದುರ್ಗ ಘಟನೆಗೆ ʻರಾಮದುರ್ಗ ದುರಂತʼ ಎಂದು ಪತ್ರಿಕೆ ಬಣ್ಣಿಸಿತ್ತಂತೆ.
ಇದೇ ಸಂದರ್ಭದಲ್ಲಿ 1939 ರ ಎಪ್ರೀಲ್ 5 ರಂದು ರಾಮದುರ್ಗದ ಜನರು  ಮಹಾರಾಜನ ವಿರುದ್ಧ ಬಂಡಾಯವೆದ್ದು, ಆಗಿನ ಪ್ರತಿಭಟನೆಯೂ ಹಿಂಸಾಚಾರ ಪಡೆದಿತ್ತು .. ಅದು ಸಹ  ರಾಮದುರ್ಗದ ದುರಂತವೇ.. ! ಆ ಕುರಿತು ಸಹ ಚಂದರಗಿ ಅವರು ಎಳೆ ಎಳೆಯಾಗಿ ವಿವರಿಸಿದ್ದರು. ಅದನ್ನು ಮುಂದಿನ ದಿನಗಳಲ್ಲಿ ನಾನು ಹಂಚಿಕೊಳ್ಳುವೆ.
          ವಾಸ್ತವದಲ್ಲಿ ನರಗುಂದ ಹೋರಾಟಕ್ಕೆ ಕಾರಣವೇ ವಿಚಿತ್ರವಾಗಿತ್ತು. ಅಂದು ಅವಿಭಜಿತ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸೌಲಭ್ಯಕ್ಕಾಗಿ  ಸರ್ಕಾರವು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಆಣೆಕಟ್ಟು ನಿರ್ಮಾಣ ಮಾಡಿತು. ಆದರೆ, ಇದಕ್ಕೆ ಪ್ರತಿಯಾಗಿ ರೈತರ ಮೇಲೆ ಅಭಿವೃದ್ಧಿ ಕರವನ್ನು ಸರಕಾರ ಹೇರಿತು. ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬುವ ಅನಿವಾರ್ಯತೆ ರೈತರಿಗೆ ಬಂದಿತ್ತು. ಇದನ್ನು ಭರಿಸದ ರೈತರ ಪಹಣಿ ಪತ್ರದ ಮೇಲೆ ‘ಸರ್ಕಾರಿ’ ಎಂದು ನಮೂದಿಸುವ ಸಾಹಸಕ್ಕೆ ಅಂದಿನ ಸರಕಾರ ಮುಂದಾಗಿತ್ತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾದರು. ಇದನ್ನು ವಿರೋಧಿಸಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಈ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. ಬಳಿಕ 1980 ಜುಲೈನಲ್ಲಿ ನರಗುಂದದ ತಹಶೀಲ್ದಾರ್ ಕಚೇರಿ ಎದುರು ರೈತರು ಸರಣಿ ಉಪವಾಸ ಆರಂಭಿಸಿದರೂ ಬೇಡಿಕೆಗೆ ಸ್ಪಂದಿಸಲಿಲ್ಲ.

1980 ರ ಜುಲೈ 21 ರಂದು ನರಗುಂದದ ತಹಸಿಲ್ದಾರರ ಕಚೇರಿಯನ್ನು ಪ್ರವೇಶಿಸಲು ಎಂಟರಿಂದ ಹತ್ತು ಸಾವಿರ ಸಂಖ್ಯೆಯಲ್ಲಿದ್ದ ರೈತರು ಪ್ರಯತ್ನಿಸಿದರು. ಆಗ ಆದ ಲಾಠೀಚಾರ್ಜ್ ಮತ್ತು ಗೋಲಿಬಾರ್ ನಲ್ಲಿ ಮೂವರು ರೈತರು ಬಲಿಯಾಗಿದ್ದರು. ರೊಚ್ಚಿಗೆದ್ದ ರೈತ ಸಮೂಹವು ಮೂರು ಜನ ಪೋಲೀಸರನ್ನು ಸಾಯಿಸಿತು . ನಂತರದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಪ್ರಾಣ ಕಳೆದುಕೊಂಡರು. ಸಾವಿರಾರು ಜನ ಗಾಯಗೊಂಡರು. ಇದರಿಂದಾಗಿ ಅಂದಿನ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಪರಿಣಾಮವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಆಡಳಿತಕ್ಕೆ ಬಂದಿತು. ಮುಂದೆ ಅಸಮರ್ಕವಾಗಿ ಹೇರಲಾಗಿದ್ದ ಅಭಿವೃದ್ಧಿ ಕರ ರದ್ದಾಯಿತು.
    ಹೀಗಾಗಿ ಜುಲೈ21 ನ್ನು ರೈತ ಹುತಾತ್ಮ ದಿನ ಎಂದು ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ರೈತರ ಕೂಗಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಅಂದು ನರಗುಂದ ಬಂಡಾಯ ಇಂದು ಕಳಸಾ- ಬಂಡೂರಿ ಹೋರಾಟದ ರೂಪ ತಳೆದಿದೆ. ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕದ ಜನ ಕಳೆದ ಧಶಕಗಳಿಂದ  ನಿರಂತರ ಹೋರಾಟ ನಡೆಸುತ್ತಿದ್ದರೂ ಯಾವ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಮಾತು ಈ ಭಾಗದಲ್ಲಿ ಕೇಳಿಬರುವುದು ಸಾಮಾನ್ಯ. 
 
ಶ್ರೀನಾಥ್‌ ಜೋಶಿ ಸಿದ್ದರ
9060188081
 

Publisher: ಕನ್ನಡ ನಾಡು | Kannada Naadu

Login to Give your comment
Powered by